ಆಡಬೇಕಿತ್ತು
ಹೌದು
ಆಡಬೇಕಿತ್ತು ಆಡಲಿಲ್ಲ
ಪ್ರಾಂಗಣ ತುಂಬ ಚೆಲ್ಲಿದ
ಉಗುರು ಬೆಚ್ಚಗಿನ ಹಗಲ ಬಿಸಿಲಲಿ
ರಾತ್ರಿಯ ನೊರೆವಾಲ ಬೆಳದಿಂಗಳಿನಲಿ
ಮಣಿದ ಮನಸು ತಣಿಯುವಂತೆ,
ಆಡಬೇಕಿತ್ತು ಆಡದೇ ಉಳಿದೆವು
ನಾನೂ ನೀನೂ ನಮ್ಮ ನಡುವೆ
ಬಂಧಿಯಾಗಿದ್ಧ ಶಬ್ಧಗಳೂ…..
ಜೀವನದ ತಿರುವಲಿ
ಜೀವದ ವಿರಹದಲಿ, ಒಡಲುರಿಯಲಿ
ಮುಖವಾಡಗಳ ಕಳಚಿ ಆಡಬೇಕಿತ್ತು,
ನಮಗೆ ಸಾಧ್ಯವಾಗದಿದ್ದರೆ
ನಮ್ಮ ಮಾತುಗಳಿಗೆ ಬಟ್ಟೆ ಬಿಚ್ಚಿ
ಒಮ್ಯಾದರೂ ಆಡಲು ಬಿಡಬೇಕಿತ್ತು
ಕೊಳೆ ತೊಳೆದು ಹರಿವ ನೀರಿನಂತೆ…….
ಸಮಯದ ಎದುರು ಸೋತು
ಪದಬಂಧದಲ್ಲಿ ಕಳೆಯದಾದಾಗ
ಕರೆಯ ರಿಂಗಣಕ್ಕೆ ಕುಣಿಯದಾದಾಗ
ಆಡಬೇಕಿತ್ತು, ಕಣ್ಣಮುಚ್ಚಿ ನೆನೆಯಬೇಕಿತ್ತು
ಆಡದೆ ದಣಿದೆವೆ? ನೆನೆಯದೆ ನೆಂದೆವೇ?
ಬಾನನೀಲಿಯಲಿ ರೆಕ್ಕೆ ಬಿಚ್ಚದೆ ನೊಂದೆವೆ
ಕೊನೆಗೆ ತಿಳಿಯಬೇಕಿತ್ತು…..
-ರವೀ ಹಂಪಿ
—–