ಅನುದಿನ ಕವನ-೧೭೧೭, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಹರಿತವಾದ ಚೂರಿಗಳಿಗಿಂತ ಮಾತಿನ ಮೊನೆಗಳು ತುಂಬಾ ನೋವು ಗೆಳತಿ
ಸುಡುವ ಬೆಂಕಿಗಿಂತ ಆಕ್ರೋಶದ ಕಣ್ಣೋಟಗಳು ತುಂಬಾ ನೋವು ಗೆಳತಿ

ಎಲ್ಲೆಡೆಯೂ ಚಂದದ ಮನಸಿನ ಗೆಳೆತನದ ಭರವಸೆಯ ಬಯಸುತ್ತ ಬಂದೆ
ಹೆಗಲ ಮೇಲೆ ಕೈ ಹಾಕಿ ಕೊರಳ ಬಿಗಿವ ಬೆರಳುಗಳು ತುಂಬಾ ನೋವು ಗೆಳತಿ

ಕನ್ನಡಿಯಂತೆ ಹೃದಯವ ತೆರೆದುಕೊಂಡೇ ಬದುಕಿದೆ ಬದುಕುತ್ತಲೇ ಬಂದೆ
ಒಳಗೆ ಬಂದು ಹೋದವರೆಲ್ಲರ ಇರಿಯುವ ನಗೆಗಳು ತುಂಬಾ ನೋವು ಗೆಳತಿ

ಅನ್ಯರಿಗೆ ಪರಿಶುದ್ಧ ಹಾಲಿನಂತೆ ಸಿಹಿಯಾಗಿರಬೇಕೆಂದೇ ಬಯಸುತ್ತ ಬಂದೆ
ಸಿಹಿ ಕುಡಿದ ಮೇಲೆ ಹಿಂಡುವ ಹುಳಿಯ ಹನಿಗಳು ತುಂಬಾ ನೋವು ಗೆಳತಿ

ನೋವಿನಲ್ಲೇ ನಗುತ್ತ ಬದುಕಬೇಕೆಂದು ನಗು ನಗುತ್ತಲೇ ಹೂ ನಗುವ ಚೆಲ್ಲಿದೆ
ಸಿದ್ಧನ ನಗೆ ಹೂಗಳ ಮೇಲೆ ಹೊಸಕಿ ನಡೆವ ನಡೆಗಳು ತುಂಬಾ ನೋವು ಗೆಳತಿ


-ಸಿದ್ಧರಾಮ ಕೂಡ್ಲಿಗಿ