ಅನುದಿನ ಕವನ-೧೭೩೮ , ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್

ನಿನ್ನ ಪಿಳಿಪಿಳಿ ಕಣ್ಣುಗಳಲಿ ಪ್ರೀತಿಯ ಕಡಲು ಉಕ್ಕುತಿದೆ ಈಗೀಗ
ಹುಡುಗಾಟದ ಒನಪ ರಾತ್ರಿಗಳಲಿ ಬಣ್ಣದ ಕನಸುಗಳು
ಮೊಳೆಯುತಿವೆ ಈಗೀಗ .

ಶಬ್ದಕೆ ನಿಲುಕದ ನಾಚಿಕೆ ಬೆಣ್ಣೆ ಕೆನ್ನೆಯ ಸವರುತಿದೆ ಈಗೀಗ
ಮುನಿಸು ಕರಗಿ ಮೋಹ ಕುಣಿಯುತ ಕಚಗುಳಿ ಇಡುತಿದೆ ಈಗೀಗ .

ಮಾದಕ ಮಾತುಗಳು ನಿದಿರೆಯಲೂ ನೆನಪಾಗಿ ಮನ ಲಾಸ್ಯವಾಡುತಿದೆ ಈಗೀಗ
ಹನಿವ ನೆನಪ ಮಳೆ ದಣಿದ ತನುವಿಗೆ ಉಲ್ಲಾಸವ ತಾಕಿಸುತಿದೆ ಈಗೀಗ .

ಸಂಜೆ ತಂಗಾಳಿಯ ನಿನ್ನ ಒಡನಾಟ ಮಧುಬಟ್ಟಲನು ಮರೆಸುತಿದೆ ಈಗೀಗ
ಉದಾಸೀನ ಕಳೆವ ನಗೆಯಲಿ ತಿಂಗಳ ಬೆಳಕು ಕಾಣುತಿದೆ ಈಗೀಗ .

ನೋವ ಭಾವ ಜಾರದಂತೆ ಮಿಥುನದ ಹಾಡು ಉಲಿಯುತಿದೆ ಈಗೀಗ
ನಾಳೆಯ ಬದುಕಿನ ಮುನ್ನುಡಿಯ ಮುಂಜಾವು ಅರಳುತ ಹಣ್ಣಾಗುತಿದೆ ಈಗೀಗ .


-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
—–