ಅಡುಗೆ ಮನೆಯ ಬೇಲಿಯೊಳಗಿನ
ಅಮ್ಮಳು ಹೂ ತುಂಬಿ..
ಅಡುಗೆ ಮನೆಯ ಕಿಟಕಿಯಿಂದ
ಬೀಳುವ ಸೂರ್ಯನ ಹೊಂಗಿರಣಕೆ
ಸದ್ದಿಲ್ಲದೆ ಮುಂಜಾನೆ ಅರಳುತ್ತ,
ತಿಳಿಗಾಳಿಗೆ ಮೈಯೊಡ್ಡಿ
ಹಾರಲು ಶುರುಮಾಡುತ್ತಳೆ
ನವಿರಾದ ರೆಕ್ಕೆಬಿಚ್ಚಿ
ಉರಿವ ಒಲೆಯ ಬೆಂಕಿಗೆ
ಉಸಿರ ಊದುತ್ತ ಸ್ವರವಿರದ
ಕೊಳಲಾಗಿ ,
ಬೇಗೆಯಲ್ಲಿ ಬೆಂದು ಬಾಡಿದ
ಹೂವಾಗಿ
ಮೌನವಾಗುತ್ತಳೆ
ದಡಗುಟ್ಟುವ ಪಾತ್ರೆಗಳ ಅಪಸ್ವರದ ಸದ್ದಿಗೆ
ತಂತಿ ಹರಿದ ವೀಣೆಯಾಗಿ ,
ಅಲ್ಲಿಂದಿಲ್ಲಿಗೆ ಸುತ್ತಿ
ಅದೇ ಒಲೆಯ ಹೊಗೆಯ
ಮಕರಂದವ ಹೀರುತ್ತಾ ಕೂತು
ಮನೆಯ ತುಂಬೆಲ್ಲ ಘಮೆಂದು ಘಮಿಸುತ್ತಾಳೆ
ಶುಚಿಕರ ಅಡುಗೆಯೊಂದಿಗೆ
ಬೆವರ ಮಳೆಯಲಿ ಮಿಂದು
ಮಂದಹಾಸದಿಂದ ಮತ್ತೆ ಹೂವಾಗಿ ನಗುತ್ತ
ಹಸಿವು ನೀಗಿಸುತ್ತಾಳೆ
ಹಗಲು ರಾತ್ರಿ
ಅಡುಗೆ ಮನೆಯ ಬೇಲಿಯೊಳಗೆ
ಅಲೆದಾಡುತ್ತಾ…

-ತರುಣ್ ಎಂ ಆಂತರ್ಯ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ
