ಅಪ್ಪ
ಬಿಸಾಡಿದ್ದ
ಅದೇಷ್ಟೋ ಹಾಳೆ ಉಂಡೆಗಳ
ನಡುವೆ
ಒಂದನ್ನೆತ್ತಿ
ಪುಟ್ಟ ಪೋರಿ ಬಿಡಿಸುತ್ತಾಳೆ
ಆಯುಷ್ಯ ಕಳೆದ
ಹಾಳೆಯ ನಡುವೆ
ಕೆಲವು ಪೂರ್ಣಪದಗಳು
ಕೆಲವು ಹೊಂದಾಣಿಕೆಗೆ
ನಿಲುಕದ ಅಕ್ಷರಗಳು
ಗೀಚಿ ಗೀಚಿ
ಕಾಟು ಹಾಕಿದ ಚಿತ್ತಾದ ಸಾಲುಗಳು
ಅಚ್ಚರಿ ಎಂಬಂತೆ
ಅಲ್ಲಲ್ಲಿ ನೋವಿನ ಕಲೆಗಳು
ಪುಟ್ಟ ಕೈಯಲ್ಲಿ
ಸೀಸದ ಕಡ್ಡಿ
ಚಿತ್ತಾದ ಸಾಲುಗಳಿಂದಲೇ
ಚಿತ್ರವಾಗಿಸುತ್ತದೆ
ಪ್ರೀತಿ ಬಣ್ಣ ಬಳೆದಾಗ
ಸುತ್ತಲಿನ ಅಕ್ಷರಗಳಲ್ಲಿ
ಗೆಲುವಿನ ಚೇತರಿಕೆ
ಮುದುಡಿದ ಹಾಳೆ
ದೋಣಿಯಾಗುತ್ತದೆ
ಆಗಿನ್ನು
ನಿಂತ ಮಳೆಯಲ್ಲಿ
ದೋಣಿ ತೇಲುತ್ತದೆ
“ನೀನೆಂದು ಬಲಹೀನನಲ್ಲ
ಬದುಕು ಮಡಿಸಿಟ್ಟ ಹಾಳೆಯಲ್ಲ”
ಎಂಬ ಸಾಲುಗಳು ಕಂಡಂತೆ
ಭಾಸವಾಗುತ್ತದೆ
ಖಾಲಿಹಾಳೆಯಲ್ಲಿ
ಮತ್ತೇ
ಚೆಂದದ ಕವಿತೆ
ಬದುಕು
ಬರೆಸಿಕೊಳ್ಳುತ್ತದೆ

-ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು
