ಅನುದಿನ ಕವನ-೧೭೬೯, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ: ಕಾದಿರುವೆ….

ಕಾದಿರುವೆ….

ಮೌನ ಮುಸುಕಿದ ದಾರಿಯಲಿ
ತೆರೆದುಕೊಳ್ಳುತ್ತಿವೆ ಆಡದೆ ಉಳಿದಿಹ
ನೂರಾರು ಮಾತುಗಳು… ಬಂದು
ಭುಜಕ್ಕೊರಗಿ ಆಲಿಸು ಸಾಕು.. ಕಾದಿರುವೆ
ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ

ಖಾಲಿತನವ ಮನದೊಳಗಡಗಿಸಿ
ಜಗದ ಕಣ್ಣ ನಂಬಿಸುವೆ ಹಾಸವ ಬೀರಿ, ಆದರೆ
ಅಂತರಾತ್ಮದ ನೋಟ ಎದುರಿಸಲಾದಿತೇ ಹೇಳು..
ಒಮ್ಮೆ ಎದುರಾಗು ಸಾಕು.. ಕಾದಿರುವೆ
ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ

ಅಂದು ನನ್ನವರು.. ಇಂದು ಅವರ್ಯಾರೋ
ಯಾರೂ ಯಾರಿಗೆ ಯಾರಿಲ್ಲ ನೋಡು
ಬದುಕಾಗಿದೆ ಕತ್ತಲೆಯು ಮುಸ್ಸಂಜೆಯ
ನುಂಗಿದ ರೀತಿ.. ಬಂದು ಅಲ್ಲೊಂದು ಒಲವಿಂದ
ನಂದದ ಕಂದೀಲ ಹೊತ್ತಿಸು ಸಾಕು…ಕಾದಿರುವೆ
ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ

ನಾಳೆಯೆಂಬುವ ಕನಸು ದೂರವೇ….
ಆದರೂ ನಿನ್ನೆಗಳ ನೆನೆಯಲಾರೆ
ಬದುಕಿನ ಕಥೆಗಿಂದು ನಿನ್ನನ್ನೇ ನಾಯಕನಾಗಿಸುವಾಸೆ…..
ನೆಮ್ಮದಿಯೇ….!!ಮೂಲಮನೆಯ ಸೇರುವ
ಕೊನೆಯ ನಿಲ್ದಾಣ ಬರುವವರೆಗೂ ಕಾಯುವೆ
ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ

✍️ಬಿಂದು ಪಿ ಗೌಡ, ಹೊನ್ನಾವರ
—–