ಕನಸಿನಲ್ಲಾದರು ನೀ ಬರಬೇಕಿತ್ತು..
ಕನಸೊಂದು ಹೆಣೆದ ಕನಸಿನಲಿ
ಕದವ ತೆರೆದೆ
ಕೋಣೆಯದು ಮತ್ತೆ ಹೃದಯದ್ದು
ಕಣ್ಣ ಮುಂದೆ ನೀ ಸುಳಿದಂತೆ ಭಾಸ
ಘಾಸಿಗೊಂಡು ಹೊರಗೆ ಎದ್ದು ಬಂದೆ
ಬಾನ ಚಂದಿರನ ಮುಖದಲ್ಲಿ
ಸಣ್ಣಗೆ ನಗು
ನೀನೆ ಉಸಿರು ನೀಡಿ ಉಳಿಸಿದ
ಗಾಳಿ
ಲೋಕ ಸುತ್ತಿಬಂದು ಹೆರಳ ತೂಗುತಿದೆ
ಹೊಳೆವ ಆ ಕಂಗಳ ಹಂಚಿನಿಂದು
ಜಾರಿ ಬಿದ್ದ ಬೆಳಕ ತುಣುಕು
ನಡುವ ನೇವರಿಸಿದೆ
ತಾರೆಗಳ ತಪ್ಪಲಿನಲ್ಲಿ
ಹೆಪ್ಪುಗಟ್ಟಿದ ಮೋಡ
ನನ್ನಾಣೆ ನಿಜ ಇದುವೆ
ಭಾವಗಳ ಬೇಗೆಯಿಂದ
ಸಲೀಸಾಗಿ ಸುಡಬಹುದಿತ್ತು ಕಾಡ
ಗುಡುಗು ಗದರಿ ಮಳೆಯು ಶುರುವಾಯ್ತು
ನಿನ್ನ ಗೈರಿ ನಿಂದ
ಮೊದಲ ಹನಿ ಎದೆಗೆ ಮುತ್ತಿಟ್ಟಿತು
ಭೋರಿಟ್ಟು ಸುರಿವ ಮಳೆಗೆ
ನಿಟ್ಟುಸಿರು ಜೊತೆಗೂಡಿ
ಗುನುಗಿತು ಒಲವ ಹಾಡ
ಕೇಳಲು ನೀ ಇರಬೇಕಿತ್ತು
ಅಷ್ಟೊತ್ತಿಗೆ ಎಚ್ಚರವಾಯ್ತು
ಹೊರಗೆ ಜೋರು ಮಳೆ ಸುರಿಯುತ್ತಿತ್ತು
ಹಾಗಾದರೂ ನೀ ಬರಬೇಕಿತ್ತು
ಕನಸಿನಲ್ಲಾದರು..

-ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ.
—–
