
ಬಳ್ಳಾರಿ,ನ.11:ವೀರ ವನಿತೆ ಒನಕೆ ಓಬವ್ವ ಅವರ ಕಾಯಕ ನಿಷ್ಠೆ, ಧೈರ್ಯ, ಸಾಹಸ ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಲಿ ಸೈನಿಕರು ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿಸಿ ಎದುರಾಳಿಯ ನೂರಾರು ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು ಎಂದು ತಿಳಿಸಿದರು. ವೀರ ವನಿತೆ ಒನಕೆ ಓಬವ್ವ ಅವರ ಧೈರ್ಯ ಮಹಿಳೆಯರಿಗೆ ಒಂದು ಸ್ಪೂರ್ತಿಯಾಗಿದ್ದು, ಅವರ ಸಾಹಸವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಕಾಯಕ ನಿಷ್ಠೆಯಿಂದ ಧೈರ್ಯವಾಗಿ ಬದುಕಬಹುದು ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎನ್.ಡಿ.ವೆಂಕಮ್ಮ ಅವರು, ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ತಂದೆ ಚಿನ್ನಪ್ಪ ತಾಯಿ ಚಿನ್ನಮ್ಮ ದಂಪತಿಯ ಸುಪುತ್ರಿಯಾಗಿ ಕ್ರಿ.ಶ.1721 ರ ನ.11 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಜನಿಸಿದಳು. ಓಬವ್ವಗೆ ಕದುರಪ್ಪ ಮತ್ತು ತಿಮ್ಮಣ್ಣ ಎಂಬ ಅಣ್ಣಂದಿರಿದ್ದರು. 18 ನೇಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪ ಓಬವ್ವಳ ಪತಿ ನಂಬಿದ ದೊರೆಗೆ ಯಾವುದೇ ಲೋಪ ಮಾಡಿದವನಲ್ಲ. ಅವನ ವ್ಯಕ್ತಿತ್ವಕ್ಕೆ ಸರಿಸಮವಾದ ಸಂಗಾತಿ ಓಬವ್ವ ಎಂದು ಜೀವನದ ಯಶೋಗಾಥೆ ಬಗ್ಗೆ ತಿಳಿಸಿದರು.
ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆ ಕಟ್ಟಿಸಿ, ಅದರ ಬಾಗಿಲಿಗೆ “ಒನಕೆ ಕಿಂಡಿ ಬಾಗಿಲು” ಎಂದು ಹೆಸರಿಟ್ಟಿದ್ದರು. ಒನಕೆ ಓಬವ್ವನನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಓಬವ್ವ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿಪುಂಜ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ರಕ್ಷಣೆಗೆ ಪಣತೊಡಬೇಕು ಎಂದರು.

ಸನ್ಮಾನ: ಕಾರ್ಯಕ್ರಮದಲ್ಲಿ ಗಣ್ಯರಾದ ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಡಾ.ಸಿ ಎಚ್.ಸೋಮನಾಥ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮತ್ತು ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಸುಗಮ ಸಂಗೀತ: ಗಾಯಕಿ ಎಸ್.ಲಕ್ಷ್ಮಿ ಪವನ್ ಕುಮಾರ್ ಸಂಗಡಿಗರು ಸುಗಮ ಸಂಗೀತ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕಮಲರತ್ನ ಬಂತೇಜಿ, ಸರಳಾದೇವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಸೋಮನಾಥ, ದಲಿತ ರಕ್ಷಣಾ ವೇದಿಕೆ ಕಾರ್ಯದರ್ಶಿ ಶಂಕರ್ ನಂದಿಹಾಳ್, ಹಿರಿಯ ಪತ್ರಕರ್ತ ಸಿ.ಮಂಜುನಾಥ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿದರು. ಪತ್ರಕರ್ತ ಗಿರೀಶ್ ಗೌಡ ನಿರೂಪಿಸಿ ವಂದಿಸಿದರು.
ಛಲವಾದಿ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
—–
