ಬಳ್ಳಾರಿಯಲ್ಲಿ ‘ಐದನಿ’ ಪ್ರಶಸ್ತಿ ಪ್ರದಾನ: ಪ್ರಾಕ್ತನಶಾಸ್ತ್ರಜ್ಞ ಪ್ರೊ.ರವಿ‌ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ – ಡಾ.‌ಕುಂ ವೀ ಶ್ಲಾಘನೆ

ಚಿತ್ರ ಕೃಪೆ: ಶಿವಶಂಕರ ಬಣಗಾರ

ಬಳ್ಳಾರಿ, ನ.15:ಪ್ರಾಕ್ತನಶಾಸ್ತ್ರಜ್ಞ
ಪ್ರೊ.ರವಿ‌ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ, ಸಂಶೋಧನಾ ಜಂಗಮ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಕುಂ ವೀರಭದ್ರಪ್ಪ (ಕುಂವೀ) ಶ್ಲಾಘಿಸಿದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಶುಕ್ರವಾರ ಸಂಜೆ ಆಯೋಜಿಸಿದ್ದ 2025ನೇ ಸಾಲಿನ ಪ್ರತಿಷ್ಠಿತ ‘ಐದನಿ ಚಿನ್ನದ ಪದಕ’ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮಹಾನ್ ಸಂಶೋಧಕರು ಎಂದು‌ ಹೇಳಿದರು. ಅಂತಾರಾಷ್ಟ್ರೀಯ ಮಟ್ಟದ ಟೋನಿ ಜೋಸೆಫ್ ಅವರ ಅರ್ಲಿ ಹ್ಯುಮನ್ಸ್ ಸಂಶೋಧನಾ ಕೃತಿಯಲ್ಲಿ ಸ್ಥಾನ ಪಡೆದಿರುವ ಪ್ರೊ. ರವಿ ಕೋರಿಶೆಟ್ಟರ್ ಅವರು ಪ್ರಾಗೈತಿಹಾಸಿಕ ಸಂಶೋಧನೆ ಮೂಲಕ ನಮ್ಮ ಮುಂದೆ ಹೊಸ ಪ್ರಪಂಚವನ್ನು ಸೃಷ್ಟಿಸುತ್ತಾರೆ ಎಂದು ಕೊಂಡಾಡಿದರು.
ಐದು ದಶಕಗಳ‌ ಕಾಲ‌ ಪ್ರಾಗೈತಿಹಾಸಿಕ ಕ್ಷೇತ್ರದಲ್ಲಿ ಸಂಶೋಧನೆ‌ ಮೂಲಕ ಅಪಾರ ಸಾಧನೆಗೈದ ಡಾ. ಕೋರಿಶೆಟ್ಟರ್ ಅವರ ಆಂಗ್ಲ ಕೃತಿಗಳು ಕನ್ನಡ ಭಾಷೆಗೆ ಅನುವಾದವಾಗಬೇಕು. ಆ ಮೂಲಕ ಸಮಸ್ತ ಕನ್ನಡಿಗರಿಗೆ ಅವರ ಸಂಶೋಧನಾ ಸಾಹಿತ್ಯ ತಲುಪಬೇಕು. ಅವರ ಸಂಶೋಧನೆಗಳು ಶಾಶ್ವತವಾಗಿ ಉಳಿಯಬೇಕು ಎಂದು ಡಾ.‌ಕುಂವೀ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ, ಶಿಕ್ಷಣಕ್ಕೆ ಮತ್ತು ವಿಜ್ಞಾನಕ್ಕೆ ವೈಚಾರಿಕತೆ ಬೇಕು. ಬದುಕಿಗೆ ತನ್ಮಯತೆ ಬೇಕು. ಎರಡೂ ಒಂದಕ್ಕೊಂದು ಸಂಬಂಧ ಇರಿಸಿಕೊಂಡಿವೆ. ಭವಿಷ್ಯಕ್ಕೆ ಏನೋ ಬೇಕು. ಅದಕ್ಕೆ ವರ್ತಮಾನದಲ್ಲಿ ಏನೋ ಆಗಬೇಕು. ಅಂತಹ ಸಂದರ್ಭದಲ್ಲಿ ನಾವಿದ್ದೇವೆ. ವಿಜಯನಗರ ಸಾಮ್ರಾಜ್ಯಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ. ಆದರೆ, ಮನುಷ್ಯನ ಇತಿಹಾಸಕ್ಕೆ ಸಹಸ್ರಾರು ವರ್ಷಗಳ ಹಿನ್ನೆಲೆ ಇದೆ. ಅದರ ಅಧ್ಯಯನ ಆಗಬೇಕು ಎಂದರು.
ಸಂಗನಕಲ್ಲಿನ ಬೀರಪ್ಪ ಶಿಲಾ ಚಪ್ಪರಕ್ಕೆ (ರಾಕ್ ಶೆಲ್ಟರ್‌ಗೆ) ಸಂರಕ್ಷಣೆ ಒದಗಿಸಬೇಕಿದೆ. ಅದಕ್ಕೆ ಬೇಕಾದ ಸುಮಾರು ಮೂವತ್ತು ಲಕ್ಷ. ರೂ. ಸಂಪನ್ಮೂಲವನ್ನು ಸಂಗ್ರಹಿಸಲು ಉಚಿತವಾಗಿ ಸಂಗೀತ ಕಾರ್ಯಕ್ರಮ ನೀಡಲು ನಾವು ಸಿದ್ಧರಿದ್ದೇವೆ. ಜಿಲ್ಲಾಡಳಿತ ಶೀಘ್ರದಲ್ಲೇ ಈ ಅವಕಾಶ ಸೃಷ್ಟಿಸಲಿ ಎಂದು ಅಪರ ಜಿಲ್ಲಾಧಿಕಾರಿಯವರನ್ನು ಹಂಸಲೇಖ ಕೋರಿದರು.‌
ಸಂಶೋಧನೆ ಸತ್ಯದ ಮುಂದುವರಿಕೆ. ಪ್ರೊ. ರವಿ ಕೋರಿಶೆಟ್ಟರ್ ಸತ್ಯದ ಪ್ರತಿಪಾದಕರು. ಮುಂಬರುವ ದಿನಗಳಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಇವರನ್ನು ಹುಡುಕಿಕೊಂಡು‌ ಬರಲಿದೆ ಎಂದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಖ್ಯಾತ ಪ್ರಾಗೈತಿಹಾಸಿಕ ತಜ್ಞ ಪ್ರೊ. ರವೀಂದ್ರ ಕೋರಿಶೆಟ್ಟರ್, ನನಗೆ ಸ್ವಂತ ಅಣ್ಣಂದಿರು ಇಲ್ಲ. ಆದರೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಹಾಗೂ ನಾದಬ್ರಹ್ಮ ಹಂಸಲೇಖ ಅವರು ಹಿರಿಯ ಸೋದರರಾಗಿದ್ದಾರೆ ಎಂದು ಭಾವುಕರಾದರು. ಬಾಲ್ಯದಿಂದಲೂ ಸಮಾಜಮುಖಿ ಜೀವನ ನಡೆಸುವ ಉದ್ದೇಶವಿತ್ತು. ಆದರೆ, ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಸಮಾಜದಿಂದ ದೂರವಿರಿಸಿತು. ಜನಸಾಮಾನ್ಯರಿಗೆ ಹತ್ತಿರವಾಗುವ ತುಡಿತ ಸದಾ ಇತ್ತು. ಕನ್ನಡ ಭಾಷೆಯ ಮೂಲಕ ನನ್ನ ಸಮಾಜಮುಖಿ ಜೀವನ ಈಗ ಸಾಧ್ಯವಾಗುತ್ತಿದೆ ಎಂದರು.
ನನಗೀಗ 73 ವರ್ಷ ಮುಂದಿನ 27 ವರ್ಷಗಳ ಕಾಲ ಜಿಲ್ಲೆಯ ಪ್ರಾಗೈತಿಹಾಸಿಕ ಅಧ್ಯಯನ,
ಪ್ರಾಕ್ತನ ಶಾಸ್ತ್ರ ಕ್ಷೇತ್ರದ ಮೂಲಕ ಸೇವೆ ಸಲ್ಲಿಸುವ ಹಂಬಲ ಎಂದು ಹೇಳುತ್ತಾ ಗದ್ಗಿತರಾದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮಾತನಾಡಿ,
ಡಾ.‌ಹಂಸಲೇಖಾ ಅವರು ಸರಕಾರಗಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇತಿಹಾಸ ಅರ್ಥಮಾಡಿಕೊಂಡರೆ ನಮ್ಮ ನಡುವಿನ‌ ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಧರ್ಮ, ಸಂಸ್ಕೃತಿ, ಭಾಷೆ ಇತ್ಯಾದಿಗಳು ನಾವು ಕಟ್ಟಿಕೊಂಡದ್ದು. ಆದರೆ, ಮೂಲದಲ್ಲಿ ನಾವೆಲ್ಲರೂ ಒಂದೇ ಅನ್ನೋದನ್ನು ಪ್ರಾಗೈತಿಹಾಸಿಕ ಅಧ್ಯಯನ ತಿಳಿಸಿಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.


ವನ್ಯಜೀವಿ ಸಂರಕ್ಷಕ ಡಾ. ಸಮದ್ ಕೊಟ್ಟೂರು ಐದನಿ ಚಿನ್ನದ ಪದಕ ಪ್ರಶಸ್ತಿ ವಿಜೇತ ಪ್ರೊ. ರವಿ‌ ಕೋರಿಶೆಟ್ಟರ್ ಅವರ ಸಾಹಸಮಯ ಜೀವನ ಕುರಿತು ಮಾತನಾಡಿದರು.‌
ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಲೀಲಾ ಸಂಪಿಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಗಾಯಕಿ ಲತಾ ಹಂಸಲೇಖ, ಶ್ರೀಮತಿ ರವಿ ಕೋರಿಶೆಟ್ಟರ್, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಸಂತೋಷ್ ಮಾರ್ಟಿನ್, ಎಂ. ಅಹಿರಾಜ್ , ಮಂಜುನಾಥ ಗೋವಿಂದವಾಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕ ಜೆ. ರಾಚೋಟಯ್ಯ ಸ್ವಾಗತಿಸಿದರು. ಪತ್ರಕರ್ತ, ಸಂಶೋಧಕ ಹರ್ಷಕುಮಾರ್ ಕುಗ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು.. ಉಪನ್ಯಾಸಕಿ ಬೆಂಗಳೂರಿನ ಸೌಮ್ಯ ಕೋಡೂರು ನಿರ್ವಹಿಸಿದರು. ಅಶ್ವಿನಿ ಡಿ.ವಿ. ವಂದಿಸಿದರು.
——