ಬಳ್ಳಾರಿ: ನಗರದ ಬಂಡಿಹಟ್ಟಿ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ವತಿಯಿಂದ ವಿದ್ಯಾರ್ಥಿಗಳಿಗೆ 500 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಪುಸ್ತಕ ವಿತರಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಗಾದಿಲಿಂಗಪ್ಪ, ಬಹಳಷ್ಟು ಬಡಮಕ್ಕಳು ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಕೊಳ್ಳಲು ಕಷ್ಟ ಪಡುತ್ತಿರುತ್ತಾರೆ ಅಂತವರನ್ನು ಗುರುತಿಸಿ ಮಕ್ಕಳ ದಿನಾಚರಣೆ ಪ್ರಯುಕ್ತ ಪುಸ್ತಕಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದರು. ಸಮಿತಿಯ ರಾಜ್ಯ ಸಂಚಾಲಕರಾದ ಡಾ.ಬಿ.ಆರ್. ವೆಂಕಟೇಶ್ ಅವರ ಆಶಯದಂತೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ದೇಶದ ಭವಿಷ್ಯ ಭದ್ರವಾಗಬೇಕಾದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ರಾಷ್ಟ್ರಪ್ರೇಮವನ್ನು ಬಾಲ್ಯದಲ್ಲೇ ನೀಡಬೇಕು ಎಂದು ಹೇಳಿದರು.
ಮುಗ್ಧ ಮನಸ್ಸುಗಳ ಲಾಲನೆ, ಪೋಷಣೆಯ ಜೊತೆಗೆ, ಏಕತೆಯ ಸದ್ಭಾವನೆಗಳನ್ನು ಮಕ್ಕಳಲ್ಲಿ ತುಂಬಾ ಬೇಕಾದ ಅವಶ್ಯಕತೆ ಇದೆ ಎಂದು ಗಾದಿಲಿಂಗಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಸಾದ್ ಬಾಬು ಕಾರ್ಯಕರ್ತರಾದ, ನಿಕಿತ್ ರಾಜ್, ನಿತಿನ್ ರಾಜ್, ವರ ಪ್ರಸಾದ್, ಗೋವರ್ಧನ್, ಪ್ರಸಾದ್ , ಜೀವನ್, ಬಾಲರಾಜ್ ಸೇರಿದಂತೆ ಇತರರಿದ್ದರು.
