ಅನುದಿನ ಕವನ-೧೭೮೫, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು, ಕವನದ ಶೀರ್ಷಿಕೆ: ಬೆಳಕು

ಬೆಳಕು..‌
ಇರುಳಿಗಿಂತಲೂ ಕಠಿಣ, ದುರ್ಬಲ.
ಪ್ರಖರತೆಗೆ ಕಣ್ಣು ಕೋರೈಸಿ
ಕೈ ಅಡ್ಡ ಹಿಡಿದು ಮುಖ ಹಿಂಡಿ
ಕಣ್ಣು ಮುಚ್ಚಬೇಕೆನಿಸುತ್ತದೆ.
ಒಂದರೆಕ್ಷಣ ಕಣ್ಮುಚ್ಚಿ ತೆರೆದಾಗ ಸುತ್ತೆಲ್ಲ
ಬರೀ ಬಣ್ಣ ಬಣ್ಣದ ಗೋಲಗಳಂತೆ
ಕಾಣುತ್ತದೆ.
ನೋಡಿದಷ್ಟೂ ಬಸವಳಿದು
ಕಣ್ಣುಮುಚ್ಚಿದರೆ ಸಾಕೆನಿಸುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ,
ಬೆಳಕನ್ನೇ‌ ನೋಡಿದ ಕಣ್ಣಿಗೆ
ಕತ್ತಲಲ್ಲಿ ದಾರಿಯೇ ಕಾಣದಾಗುತ್ತದೆ.

ಇರುಳು..
ಸಂಪೂರ್ಣವಾಗಿ ಕಣ್ತೆರೆದು ನೋಡುವುದನ್ನು
ಕಲಿಸುವ ಗಳಿಗೆ.
ಕಣ್ತೆರೆಯುವುದು ಆಯಾಸವಾಗುವುದಿಲ್ಲ,
ಒಂದು‌ ತಣ್ಣನೆಯ ಅನುಭವ ನೀಡುತ್ತಾ
ಸುತ್ತಲಿರುವ ಜಗತ್ತನ್ನು ಸೂಕ್ಷ್ಮವಾಗಿ
ಗಮನಿಸುವುದ ಕಲಿಸುತ್ತದೆ.
ಕಡುಗತ್ತಲಲ್ಲಿ ಕಾಣದ್ದಕ್ಕೆ ಕಣ್ಣು ನಿಧಾನವಾಗಿ
ಹೊಂದಿಕೊಳ್ಳುತ್ತದೆ.
ಬದುಕ ನೋಡುವುದ ಕಲಿಯುತ್ತದೆ.
ಕ್ಷಣಗಳು ಕಳೆದ ಹಾಗೆ ಕತ್ತಲಲ್ಲಿ
ಇಂಚಿಂಚಾಗಿ ಸ್ಪಷ್ಟತೆ ಆವರಿಸಿಕೊಳ್ಳುತ್ತದೆ
ಮಂದ ಬೆಳಕು ಸಹ.

ಕತ್ತಲಲ್ಲಿ ಕಲಿತ ದಾರಿಯನ್ನು
ಬೆಳಕಲ್ಲೂ ನಡೆಯಬಹುದು..
ಆದರೆ, ಬೆಳಕಲ್ಲಿ ಮಾತ್ರ ನಡೆದ ದಾರಿ
ಕತ್ತಲಲ್ಲಿ ದೊರಕುವುದೇ ಇಲ್ಲ.‌

ಬದುಕಿನ‌ ಹಲವು ಕ್ಷಣಗಳಲ್ಲಿ
ಇರುಳು ಬೆಳಕಿಗಿಂತ ಹಾಯೆನಿಸುತ್ತದೆ..

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು