ಒಮ್ಮೊಮ್ಮೆ ಬದುಕಿಗೂ
ಅವಳ ಬಳಿ ಮೊಣಕಾಲೂರಿ
ಕ್ಷಮೆ ಕೇಳಬೇಕೆನಿಸುತ್ತದೆ.
ಅರ್ಧ ರಾತ್ರಿಯಲ್ಲಿ ಆಕೆ ಎದ್ದು
ಬದುಕಿನ ಪರ್ಪಸ್ ಹುಡುಕುವಾಗ..
ಬಕೆಟಿಗೆ ಜೋರಾಗಿ ನೀರುಬಿಟ್ಟು
ಹೃದಯ ನಿಂತೇ ಹೋಗುವಷ್ಟು
ತೀವ್ರವಾಗಿ ಅಳುವಾಗ..
ಇದ್ದ್ಕಕಿದ್ದಂತೆ ಸಂತೆಯಲ್ಲೂ
ಉಸಿರುಕಟ್ಟಿ ಚಡಪಡಿಸುವಾಗ.
ಒಡೆದುಹೋದ ತನ್ನದೇ ಬದುಕಿನ
ಚೂರುಗಳನ್ನು ಆಯ್ದುಕೊಳ್ಳುವ
ಹೊತ್ತಲ್ಲಿ ಅವಳ ಬೆರಳುಗಳಿಗೆ
ಗಾಯವಾದಾಗ,
ಇರುವ ಒಂದೇ ಪ್ರಶ್ನೆಗೆ ಸರಿಯಾದ
ಉತ್ತರ ಕೊಟ್ಟುಬಿಡು ಎನ್ನುವಾಗ..
ಬದುಕಿಗೂ ಒಂದು ಸಣ್ಣ
ಗಿಲ್ಟ್ ಕಾಡುತ್ತದೆ..
ಕ್ಷಮೆ ಕೇಳುವ ಅಭ್ಯಾಸ ಬದುಕಿಗಿಲ್ಲ.
ಸರಿಪಡಿಸುವಂಥ ಸಣ್ಣ ತಪ್ಪುಗಳನ್ನು
ಬದುಕು ಮಾಡಿಯೇ ಇಲ್ಲ,
ಒಮ್ಮೆ ಗಹಗಹಿಸಿ ನಕ್ಕ ಬದುಕು
ಈಗ ಪಾಪಪ್ರಜ್ಞೆಯಲ್ಲಿ ಮೆತ್ತಗಾಗಿದೆ.
ಅವಳು ದ್ವೇಷಿಸುವುದೂ ಇಲ್ಲ,
ಕ್ಷಮಿಸುವುದೂ ಇಲ್ಲ.
ಮೌನವಾಗಿ ನೋಡುತ್ತಿರುತ್ತಾಳೆ.
ಅವಳ ಮೌನದ ಮೊರೆತ
ಬದುಕ ಇನ್ನಷ್ಟು ಕುಗ್ಗಿಸುತ್ತದೆ.
ಅವಳಿರುವವರೆಗೂ, ಬದುಕು
ಪಶ್ಚಾತ್ತಾಪದ ಭಾರ ಹೊರಬೇಕಿದೆ
.
ಅವಳಿಲ್ಲದಿದ್ದರೆ ಬದುಕಿಗೂ ಅಸ್ತಿತ್ವವಿಲ್ಲ
ಅನ್ನುವುದು ಬದುಕಿಗೂ ಗೊತ್ತು.
ಗಟ್ಟಿಯಾದ ಅವಳ ಜೊತೆ, ಒಂದೇ ಹೆಜ್ಜೆ
ಹಿಂದಿಟ್ಟು ಮೆತ್ತಗಾದ ಬದುಕೂ ಸಾಗುತ್ತದೆ.
ಒಮ್ಮೊಮ್ಮೆ…
ಬದುಕಿಗೆ ಭಾರ ಹೆಚ್ಚಾಗಿ ದಣಿದಾಗ,
ಅವಳೂ ಕೈ ಹಿಡಿದು
ಬದುಕ ನಡೆಸುತ್ತಾಳೆ.

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
