ಅನುದಿನ ಕವನ-೧೯೧೬, ಕವಿ: ಟಿ.ಪಿ.ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ನಿನ್ನ ಸವಿನೋಟ

ನಿನ್ನ ಸವಿನೋಟ

ನಿನ್ನ ಸವಿ ನೋಟವೆ ಮನದಲ್ಲಿ ತುಂಬಿ ನಿಂತಿದೆ;
ನಿನ್ನ ತುಸು ಕಾಣದೆ ತನುವೆಲ್ಲ ಬಾಡಿ ಮಿಡುಕಿದೆ!

ನಿನ್ನ ನೆನಪೆಲ್ಲ ನೆರಳಾಗಿ ಹಾದಿಯೆಲ್ಲ ಹರಡಿದೆ;
ನಿನ್ನ ನಗುವಿರದೆ ದಿನವೆಲ್ಲ ಇರುಳಾಗಿ ನಿಂತಿದೆ!

ಗಾಳಿಯೆ ಸವರಿ ಹೋದ ಸುಗಂಧವು ನಿನ್ನೆಸರು;
ಹೃದಯದೊಳು ಹಚ್ಚೆಯೇ ನಿನ್ನೆಸರಿನ ಉಸಿರು!

ಕನಸಿನ ಬೀದೀಲಿ ನಿನ್ನೆಜ್ಜೆ ಗುರುತು ಹುಡುಕಿದೆ;
ಪ್ರತಿಕ್ಷಣವು ನಿನ್ನದೇ ನೆನಪು ಹಿಡಿದು ಬದುಕಿದೆ!

ನೀನಿಲ್ಲದೆ ಈ ಬದುಕು ಬರಿದು ಮರಳುಗಾಡು;
ನೀ ಬಂದರೆ ಮಾತ್ರ ಹಸಿರು ನನ್ನ ಪ್ರೀತಿ ಹಾಡು!

ಚಂದ್ರನ ಬೆಳಕು ಇಂದು ಮಂಕಾಗಿದೆ ನಿನ್ನಿಲ್ಲದೆ;
ನಿನ್ನ ಕಣ್ಗಳ ಜ್ಯೋತಿ ಬೇಕಾಗಿದೆ ನನ್ನ ಬದುಕಿಗೆ!

ಬಾ ಮತ್ತೆ ನನ್ನೆದೆ ಬಳಿಗೆ ಒಲವಿನ ಮಳೆಯಾಗಿ;
ನಿನ್ನಿಲ್ಲದೆ ಈ ಹೃದಯವೆ ಬಿರಿದಿದೆ ಇಳೆಯಾಗಿ!

ನಿನ್ನ ಮಾತಿನ ಮಧುರತೆ ಕಿವಿಯೊಳಗೆ ಇಂಚರ;
ನಿನ್ನ ಸ್ಪರ್ಶದ ಕನಸಿನಲ್ಲಿ ಮನದಿ ತಾಳದ ಕಾತರ!

ರಾತ್ರಿಯ ನಿಶ್ಶಬ್ದದಲ್ಲು ನಿನ್ನ ಹೆಸರೇ ಸವಿಗಾನ;
ನಿನ್ನೆಜ್ಜೆಯ ಸದ್ದು ಕೇಳಿ ನನ್ನ ಹೃದಯವೆ ತಲ್ಲಣ!

ತಾರೆಗಳು ನೀ ಬರುವಂತ ಕಥೆಗಳನ್ನೆ ಹೇಳುತ್ತಿವೆ;
ನನ್ನ ಕಣ್ಗಳು ಸದಾ ನಿನ್ನ ದಾರಿಯ ಕಾಯುತ್ತಿವೆ!

ನಿನ್ನಿಲ್ಲದ ಪ್ರತಿಕ್ಷಣ ಯುಗದಷ್ಟು ದೀರ್ಘವಾಗಿದೆ;
ನಿನ್ನೊಂದಿಗಿನ ಕ್ಷಣವೆಲ್ಲ ಸ್ವರ್ಗದಂತೆ ಹಿತವಾಗಿದೆ!

ಬರುವೆಯ ಮತ್ತೆ ನನ್ನ ಕನಸಿನ ಲೋಕಕ್ಕೆ ನೀನು;
ನಿನ್ನೊಡನೆಯೆ ಬದುಕಲು ಕಾಯುತ್ತಿರುವೆ ನಾನು!


-ಟಿ.ಪಿ.ಉಮೇಶ್, ಚಿತ್ರದುರ್ಗ