ಬೆಳಗಾವಿ, ಡಿ.8: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ. ಅನ್ನು ದಾಖಲಿಸಲು ಸರ್ಕಾರದಿಂದ ಕಾರ್ಯಕಾರಿ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ನುಡಿ ಕರ್ನಾಟಕ ವೆಬ್ ಸೈಟ್ ವರದಿ ಪ್ರಕಟಿಸಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಗೆ ಉತ್ತರಿಸಿರುವ ಸಚಿವರು, 2025ರ ಅ. 8ರಂದು ಉಚ್ಚ ನ್ಯಾಯಾಲಯದ ಪೀಠವು ನೀಡಿರುವ ತೀರ್ಪಿನ ಕುರಿತು ಕಾನೂನು ಅಭಿಪ್ರಾಯ ಪಡೆದು ಕಾರ್ಯಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಶಾಸಕ ಮಧು ಜಿ.ಮಾದೇಗೌಡ ಅವರು, ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡಿಮೆ ಗೌರವಧನ ಪಡೆದು ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಯುಜಿಸಿ ಮಾನದಂಡಗಳ ಅರ್ಹತೆ ಪಡೆಯದ ಅತಿಥಿ ಉಪನ್ಯಾಸಕರನ್ನು ಮಾನವೀಯ ನೆಲೆಗಟ್ಟಿನಲ್ಲಿ ಮುಂದುವರೆಸುವ ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ಕಾನೂನು ತೊಡಕು ಎದುರಾಗದಂತೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಕ್ರಮ ಕುರಿತು ಪ್ರಶ್ನೆ ಕೇಳಿದ್ದರು.
ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅಫೀಲು ಅರ್ಜಿ ಕುರಿತು ತೀರ್ಪು ನೀಡಿ ಅತಿಥಿ ಉಪನ್ಯಾಸಕರ ಆಯ್ಕೆಗೆ ಯುಜಿಸಿ ವಿದ್ಯಾರ್ಹತೆ (ಎನ್.ಇ.ಟಿ/ಎಸ್.ಎಲ್.ಇ.ಟಿ/ಪಿ.ಎಚ್.ಡಿ) ಮಾನದಂಡವನ್ನು ಅನುಸರಿಸುವಂತೆ ಆದೇಶಿಸಿತ್ತು. ಈ ತೀರ್ಪನ್ನು ವಿಭಾಗೀಯ ಪೀಠವು ಎತ್ತಿ ಹಿಡಿದು, 2025-26ನೇ ಸಾಲಿನಿಂದ ಯುಜಿಸಿ ನಿಯಮಗಳನ್ವಯ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
(ಸುದ್ದಿ ಕೃಪೆ: ನುಡಿ ಕರ್ನಾಟಕ)
