ಹಣತೆಗಳ ಬೆಳಕಿನಲ್ಲಿ ಮಿಂದೆದ್ದ ‘ಕೊಟ್ಟೂರು’! 🪔 ಕಿರು ಬರಹ: ಪ್ರೊ. ಎಸ್ ಎಂ ಶಶಿಧರ್, ಬಳ್ಳಾರಿ

ಹಣತೆಗಳ ಬೆಳಕಿನಲ್ಲಿ ಮಿಂದೆದ್ದ ‘ಕೊಟ್ಟೂರು’! 🪔

ಕೊಟ್ಟೂರಿನಲ್ಲಿ ಹಣತೆಗಳ ಸಂಭ್ರಮಕ್ಕೆ ಎಣೆಯೇ ಇಲ್ಲ! ಇಲ್ಲಿ ದೀಪಾವಳಿ ಅನ್ನೋದು ಒಂದು ಆರಂಭ ಅಷ್ಟೇ. ಅಲ್ಲಿಂದಾಚೆಗೆ ಬರುವ ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ ನಡೆಯುವ ಗುರು ಕೊಟ್ಟೂರೇಶ್ವರನ ಪಲ್ಲಕ್ಕಿ ಮೆರವಣಿಗೆಯ ಸೊಬಗೇ ಬೇರೆ. ಊರಿನ ಪ್ರತಿ ಮನೆಯ ಮುಂದೆಯೂ ಮಿನುಗುವ ಆ ಹಣತೆಗಳು ಚೆಲ್ಲುವುದು ಬರೀ ಬೆಳಕನ್ನಲ್ಲ; ಅದೊಂದು ಬಗೆಯ ಸಾತ್ವಿಕ ನೆಮ್ಮದಿ. ಅದನ್ನೇ ನಾವು ‘ಭಕ್ತಿ’ ಅನ್ನುತ್ತೇವೆ.

ನಿನ್ನೆ ನಡೆದ ಕಾರ್ತಿಕೋತ್ಸವದಲ್ಲಿ ಈ ಸಡಗರ ಅದರ ‘ಕ್ಲೈಮ್ಯಾಕ್ಸ್’ ತಲುಪಿತ್ತು!
ದಿನಾಂಕ ಎಂಟರ ಸೋಮವಾರ ಇಡೀ ಕೊಟ್ಟೂರು ಪಟ್ಟಣ ಲಕ್ಷ ದೀಪಗಳ ಬೆಳಕಿನಲ್ಲಿ ಝಗಮಗಿಸುತ್ತಿತ್ತು. ಮುಖ್ಯ ಬೀದಿಗಳಲ್ಲಿ ಸಾಲು ದೀಪಗಳು, ಕಿಕ್ಕಿರಿದು ತುಂಬಿದ್ದ ಭಕ್ತಸಾಗರ… ರಾತ್ರಿ 11 ಗಂಟೆಗೆ ಆರಂಭವಾಗಿ ನಸುಕಿನ 5 ಗಂಟೆಯವರೆಗೂ ನಡೆದ ಆ ‘ಬೆಳ್ಳಿ ರಥೋತ್ಸವ’ದ ವೈಭವ ಕಣ್ತುಂಬಿಕೊಳ್ಳುವುದೇ ಒಂದು ಯೋಗ.
ಒಂದು ಮಾತು ಸತ್ಯ.
ಕೊಟ್ಟೂರಿನವರು ಜಗತ್ತಿನ ಯಾವುದೇ ಮೂಲೆಯಲ್ಲಿ ‘ಸೆಟಲ್’ ಆಗಿರಲಿ, ಕೊಟ್ಟೂರೇಶ್ವರನ ಈ ಕಾರ್ತಿಕೋತ್ಸವ ಮತ್ತು ರಥೋತ್ಸವವನ್ನು ಮಾತ್ರ ‘ಮಿಸ್’ ಮಾಡಿಕೊಳ್ಳುವುದಿಲ್ಲ. ಕುಟುಂಬ ಸಮೇತ ಬಂದು, ಬಂಧು-ಮಿತ್ರರ ಜೊತೆಗೂಡಿ ಊರಿನ ಸಂಭ್ರಮದಲ್ಲಿ ಲೀನವಾಗುತ್ತಾರೆ.
ಯಾಕೆ ಗೊತ್ತಾ?
“ತನ್ನ ಹಿಂದೆ ಒಂದು ಪರಂಪರೆಯೇ ಇದೆ, ಗುರು ಕೊಟ್ಟೂರೇಶ್ವರನ ಕೃಪೆ ಇದೆ” ಎಂಬ ಧೈರ್ಯ ಅವರಿಗೆ ಸಿಗುತ್ತದೆ. ನಮ್ಮ ‘ಮಾಡರ್ನ್’ ಬದುಕಿನ ಜಂಜಾಟಗಳ ನಡುವೆ ಕಳೆದುಹೋದ ನಮ್ಮತನವನ್ನು ಹುಡುಕಿಕೊಳ್ಳಲು ಇಂತಹದೊಂದು ನೆಪ ಬೇಕಲ್ಲವೇ?

ರಸ್ಕಿನ್ ಬಾಂಡ್ ಬರೆಯುತ್ತಾರೆ- “Small towns have long memories” (ಸಣ್ಣ ಊರುಗಳಿಗೆ ನೆನಪಿನ ಶಕ್ತಿ ಜಾಸ್ತಿ) ಅಂತ. ಅದು ಎಷ್ಟು ಸತ್ಯ ಅಲ್ವಾ? ಸಿಟಿ ನಮಗೆ ಬದುಕಲು ‘ಜಾಗ’ (Space) ಕೊಡಬಹುದು, ಆದರೆ ನಮ್ಮ ಅಸ್ತಿತ್ವಕ್ಕೆ ಒಂದು ಅರ್ಥ (Meaning) ಕೊಡುವುದು ಇಂತಹ ಸಣ್ಣ ಊರುಗಳೇ. 🏡✨

-ಪ್ರೊ. ಎಸ್ ಎಂ ಶಶಿಧರ್, ಬಳ್ಳಾರಿ