ಬಳ್ಳಾರಿ, ಡಿ.16: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಜ.3 ರಂದು ನಗರದಲ್ಲಿ ಏರ್ಪಡಿಸಲಿರುವ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸಂಭ್ರಮ, ಸಡಗರಗಳಿಂದ ಯಶಸ್ವಿಗೊಳಿಸೋಣ ಎಂದು ಮಾಜಿ ಸಚಿವ, ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹೇಳಿದರು.
ಮಂಗಳವಾರ ನಗರದ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಬಳ್ಳಾರಿ ನಗರ-ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರನ್ನುದ್ಧೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಳ್ಳಾರಿ ಜಿಲ್ಲೆ, ಗ್ರಾಮಾಂತರ ಕ್ಷೇತ್ರದ ಹಾಗೂ ಜಿಲ್ಲೆಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರೊಂದಿಗೆ ಸಭೆ ನಡೆಸೋಣ. ಶಾಸಕ ನಾರಾ ಭರತ್ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ನಾವೆಲ್ಲರೂ ಸಹಕಾರ ನೀಡಿ ಅದ್ಧೂರಿಯಾಗಿ ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭ ಸಮಾಜದ ಮುಖಂಡರು ಮಾಜಿ ಸಚಿವ ನಾಗೇಂದ್ರ ಅವರಿಗೆ ಕಾರ್ಯಕ್ರಮದ ಕರಪತ್ರವನ್ನು ನೀಡಿ, ಸನ್ಮಾನಿಸಿ ಆಹ್ವಾನಿಸಿದರು.
ಈ ವೇಳೆ ವಾಲ್ಮೀಕಿ ನಾಯಕರ ಸಮಾಜದ ಪರಶುರಾಮುಡು, ದೇವಿನಗರ ಹೊನ್ನೂರಪ್ಪ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಗಂಗಾಧರ, ಗಂಗಪ್ಪ, ಯರಗುಡಿ ಸೋಮಣ್ಣ, ಮುದಿ ಮಲ್ಲಯ್ಯ, ಪಿ.ಜಗನ್ನಾಥ, ಹುಲಿಯಪ್ಪ, ದುರ್ಗಾ ಮೋಹನ್, ಸತ್ಯನಾರಾಯಣ, ವಿ.ಎನ್.ಶ್ರೀನಾಥ್, ರಾಮಣ್ಣ, ಸೇರಿದಂತೆ ಹಲವರು ಹಾಜರಿದ್ದರು.
