
ನಿನ್ನೆಸರಲ್ಲಿ ಬದುಕಿದೆನು.ನಿನ್ನುಸಿರಲ್ಲಿ ಬೆರೆತಿಹೆನು. ತನುಮನವ ಆವರಿಸಿ ಅರ್ಧನಾರೀಶ್ವರನಂತೆ ಕಾಣುವ ನಿನಗೆ ನೀನೇ ಯಾರೆಂದು ತಿಳಿಯದು ? ಎಂತಹ ವಿಪರ್ಯಾಸ !
ಅಂದು, ಯಾಕೋ ಸ್ವಲ್ಪ ಮನಸ್ಸಿಗೆ ಕಸಿವಿಸಿ, ಬೇಸರ. ಎದ್ದು ಓಡಿ ಹೋಗಿ ಕನ್ನಡಿಯ ಮುಂದೆ ನಿಂತರೆ ನನ್ನನ್ನು ನೋಡಿ ನಗುವ ಭಾವ. ಯಾರೋ ಹಿಂದೆ ಬಂದು ತಬ್ಬಿದ ಮನೋಭಾವ ‘ ಗುಲಾಬಿ ಹೂವಿಗೆ ಮುಳ್ಳು ತಾಕಿದ ನೋವಿ’ ನಂತೆ ಭಾಸವಾಯಿತು. ಹಿಂತಿರುಗಿ ನೋಡಿದರೆ ಮುಖವೆಲ್ಲ ಸುಟ್ಟು ಹೋಗಿದೆ. ಕರ್ಕಶ ಧ್ವನಿ, ನೆಲಕ್ಕೆ ಊರಲಾಗದಷ್ಟು ಕಾಲು ಬೇನೆ, ಕೈಯಲ್ಲಿದ್ದ ಬೆರಳುಗಳು ಅಂಗುಲಿ ಮಾಲನಿಗೆ ಹಾರವಾದಂತೆಯೇ ಭಾಸವಾಯಿತು.
ಹಣತೆಯ ಬೆಳಕು ಕೇಳಿತು? ನೀನು ಯಾರೆಂದು? ನಗುತ್ತಾ ಹೇಳಿತು. ನಿನ್ನಲ್ಲಿಯೇ ನಾನಿದ್ದೇನೆ. ಎರಡು ಮನಸುಗಳ ಕಲ್ಪನೆ, ಭಾವನೆಗಳ ಪ್ರತಿರೂಪ. ನೀನೆಷ್ಟೇ ದೂರ ಹೋದರು ಹಿಂಬಾಲಿಸುವ ಭೂತದಂತೆ ಕಣ್ಣಿಗೆ ಕಾಣದ ಮಾಯೆ. ಒಪ್ಪಿಕೋ , ನನ್ನನ್ನು ನಿನ್ನ ಅನುಜನೆಂತಲೋ ಅಥವಾ ಭಾತೃ ವೆಂತಲೋ ? ” ನಾಡು ಹೋಗೆಂದಿದೆ, ಕಾಡು ಬಾ ಎಂದಿದೆ,” ಆದರೂ ತವರಿನ ಮೋಹದ ಬಲೆಗೆ ಸಿಲುಕಿದಂತೆ ನಿನ್ನಲ್ಲಿ ನಾನು ಬೆರೆತಿರುವೆನು. ಕಣ್ಮುಚ್ಚಿ ಕರೆದರೂ ಬರುವೆ ಆದರೆ ಕಾಣದ ಕೈಗಳಲಿ ಬಂಧಿಯಾಗಿಹೆನು. ಮೆಲ್ಲನೆ ಹೆಜ್ಜೆ ಹಾಕುತ ಬಿರು ಬಿಸಿಲಿನಲಿ ಸೋತಿದೆ ಮೊಗ.. ತಿರುಗಿ ನೋಡಿದರೆ ಒಮ್ಮೊಮ್ಮೆ ಭಯದ ಭೀತಿ, ಯಾರೋ ಹಿಂಬಾಲಿಸುವ ರೀತಿ. ಕೂಗಿದರೆ ಪ್ರತಿಧ್ವನಿಯೇ ಹೊರತು ಬೇರೊಂದು ಧ್ವನಿ ಕೇಳಿಸದು. ಸಮಯವಾದಂತೆ ಟಿಕ್ ಟಿಕ್ ಶಬ್ದದ ಜೊತೆಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ ಸಾಗಿದೆ ಭ್ರಮರದ ಮಾಯೆ.
ಕಾಲ ಬದಲಾದಂತೆ ಬದಲಾವಣೆ ಸಹಜ. ದಿನವೆಲ್ಲ ಸಂಗಾತಿ , ಸೂರ್ಯಾಸ್ತದ ವೇಳೆಗೆ ಕುಡುಕನಂತಹ ಪತಿ. ಸೂರ್ಯೋದಯದಲಿ ಬೆಳ್ಳಿಯ ರಥದಲ್ಲಿ ಕುಳಿತು ಹಿಂಬಾಲಿಸಿ ತಾನು ಯಾರೆಂದು ಹುಡುಕುವಷ್ಟರಲ್ಲಿ ಸುಕ್ಕು ಗಟ್ಟಿದ ತನುವಿನಲಿ ನಿರಾಸೆ ಮೂಡಿದೆ.ಜೀವನವೇ ಮುಗಿದು ಸ್ಮಶಾನದ ಹಾದಿ ಹಿಡಿದಿದೆ. ಬದುಕಿನ ಕೊನೆಯ ಪಯಣದ ಮೆರವಣಿಗೆಯಲಿ ಒಬ್ಬ ನಾಲ್ಕಾದ ಭಾವ. ತಿರುಗಿ ನೋಡಿದರೆ ಕತ್ತಲೆಯ ಬದುಕಿನಲಿ ನಿದ್ರಾ ದೇವತೆಯ ಸೆರಗಿನಲಿ ಮಲಗಿಹೆನು … ನಾನು ಹಾಗೂ ನಾನೆಂಬ ಜೀವ.

-ಗಾಯತ್ರಿ ಬಿ
ಶಿಕ್ಷಕಿ
ಜಿಂದಾಲ್ ಆದರ್ಶ ವಿದ್ಯಾಲಯ, ತೋರಣಗಲ್ಲು
