ಗಜಲ್
ಬದುಕಿನೊಂದಿಗೆ ಎಷ್ಟು ನಡೆದರು ಸಾವಿನ ಬಂಡಿಯ ಏರಲೇಬೇಕಲ್ಲ
ಎಷ್ಟು ನನ್ನವರೆಂದರೂ ಕೊನೆಗೊಮ್ಮೆ ಪಾಜಿಯ ತಲುಪಲೇಬೇಕಲ್ಲ
ನೀರವತೆಯ ಒಂಟಿ ದಾರಿಯಲಿ ಅದೆಷ್ಟೊಂದು ಹೆಗಲೇರಿವೆ ಸದ್ದುಗಳು
ಮುಗಿಯದ ದಾರಿಯೆಂದು ಸಾಗುವಾಗಲೇ ಬಯಕೆಯ ಸುಡಲೇಬೇಕಲ್ಲ
ಅರಿವು ಮರೆವುಗಳೆಂಬ ಒಡನಾಟಗಳ ನಡುವೆಯೆ ಬೆಳಗಿದ ದೀಪವಿದು
ಏಸು ದಣಿವಾಗಿದೆಯೆಂದರು ಸಿಹಿಕಹಿಗಳ ಮೂಟೆಯ ಹೊರಲೇಬೇಕಲ್ಲ
ಮಧುಶಾಲೆಯ ಮಾಲಿಕನು ಸಮಯವಾಯಿತೆಂದು ಅವಸರಿಸುತಿಹನು
ಅಂಗಡಿಯ ಕದವಿಕ್ಕುವುದರೊಳಗೆ ಲೆಕ್ಕದ ಹಾಳೆಯ ನೋಡಲೇಬೇಕಲ್ಲ
ಅದೇಸು ಪಾದಗಳು ಅಳಿಸಿಹೋಗಿವೆಯೊ ಸಿದ್ಧ ಕಾಲನ ಮರಳುಗಾಡಿನಲಿ
ಹಣ್ಣಾಗಿ ಕಳಚಿ ಬೀಳುವುದರೊಳಗೆ ಎಲ್ಲರಿಗು ವಿದಾಯ ಹೇಳಲೇಬೇಕಲ್ಲ

-ಸಿದ್ಧರಾಮ ಕೂಡ್ಲಿಗಿ
