ಅನುದಿನ ಕವನ-೧೮೧೬, ಕವಯತ್ರಿ:ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಮನೆಯ ಮುಂದಿನ ಮರಕ್ಕೆ
ಜೋತ ಮುದಿ ಜೀವ

ತಲೆಗೆ ಸುತ್ತಿದ ರುಮಾಲು
ಮೇಲೊಂದಿಷ್ಟು ಹುಲ್ಲಿನ ಎಳೆಗಳು
ಏಸುಕ್ರಿಸ್ತ ತೊಟ್ಟ
ಮುಳ್ಳಿನ ಕಿರೀಟದಂತೆ

ಕೈಯ ತುಂಬೆಲ್ಲ ಒರಟು ಗೆರೆಗಳು
ಮೊಳೆ ಹೊಡೆಯುವುದಷ್ಟೇ ಬಾಕಿ

ಮುಖ
ಕ್ಷಮೆಯ ಮೀರಿಸುವಂತೆ
ಶೂನ್ಯ ದಿಟ್ಟಿಸುತ್ತಿತ್ತು

ನೇಗಿಲೇ ಶಿಲುಬೆಯಾದಮೇಲೆ
ಹೊತ್ತು ನಡೆದದ್ದೂ ಆಯಿತು
ಕುಸಿದು ಬಿದ್ದದ್ದೂ ಆಯಿತು

ಈ ಜೀವಕ್ಕೆ
ತೀರ್ಪಿನ ದಿನದಂದು
ಉತ್ತರ ಸಿಗುವುದಿಲ್ಲ.
ಮತ್ತೊಮ್ಮೆ ಬದುಕುವುದೂ
ಬೇಕಿಲ್ಲ.

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು