ಅನುದಿನ ಕವನ-೧೮೬೬, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅಮ್ಮನಿಗೆ ಋಣಿ

#ಹುಟ್ಟಿಗೊಂದು ಕವಿತೆ

ಅಮ್ಮನಿಗೆ ಋಣಿ

ಜೋಲಿ ಹಾಕಿ ಲಾಲಿ ಹಾಡಿ
ನೀ ತೂಗಿ ಬಿಟ್ಟ ಕಾಯ ನಾನು
ಖಾಲಿ ಇದ್ದ ಕುಂಭದಲ್ಲಿ
ನೀ ತುಂಬಿಸಿಟ್ಟ ವಾಯು ನಾನು

ಕಾಣದಂತೆ ಕರುಳಿನೊಳಗೆ
ಗುಡಿಯ ಕಟ್ಟಿ ಇರಿಸಿದೆ
ನೋಯದಂತೆ ಕಾವುಕೊಟ್ಟು
ಹುಡಿಯಲಿರಿಸಿ ರಮಿಸಿದೆ

ಅರಿಯದಾದೆ ಮೊದಲಿನಲ್ಲಿ
ನಿನ್ನ ಮಹಿಮೆಯಾಳವ
ಕುಡಿಯು ನನ್ನ ಒಡಲಿನಲ್ಲಿ
ಮಿಡಿದು ತಿಳಿಸಿತರಿವಿನಾಳವ

ನಿನ್ನ ಎದೆಯ ಬಾನಿನಲ್ಲಿ
ಮಿನುಗೊ ಸಣ್ಣ ತಾರೆ ನಾನು
ನನ್ನ ಜೀವದ ಇರುಳಿನಲ್ಲಿ
ಹೊಳೆವ ಹೊನ್ನ ಚಂದ್ರ ನೀನು

ನೀನು ತುಂಬಿದುಸಿರ ಚೀಲ
ಉಬ್ಬಿ ಹಾರುವ ಪುಗ್ಗೆಯು
ತಬ್ಬುತಿರಲಿ ನಿನ್ನ ಋಣವು
ಹಬ್ಬವಾಗಿ ಪ್ರತಿ ಜನ್ಮ ದಿನಕು🌹


-ವಿಶಾಲ ಆರಾಧ್ಯ, ಬೆಂಗಳೂರು
—–