ಹಿರಿಯ ಸಾಹಿತಿ ಟಿ. ಕೆ. ಗಂಗಾಧರ ಪತ್ತಾರ ಅವರ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಕೃತಿ ಲೋಕಾರ್ಪಣೆ: ಪಾಶ್ಚಾತ್ಯರಿಗಿದ್ದ ಇತಿಹಾಸ ಪ್ರಜ್ಞೆ ಭಾರತೀಯರಲ್ಲಿ ಕಡಿಮೆ -ಡಾ.ಸಿ.ಬಿ‌ ಚಿಲ್ಕರಾಗಿ ಖೇದ

ಬಳ್ಳಾರಿ,ಫೆ.8: ಪಾಶ್ಚಾತ್ಯರಿಗಿದ್ದ ಇತಿಹಾಸ ಪ್ರಜ್ಞೆ ಭಾರತೀಯರಲ್ಲಿ ಕಡಿಮೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ‌ ಚಿಲ್ಕರಾಗಿ ಅವರು ಖೇದ ವ್ಯಕ್ತಪಡಿಸಿದರು.
ನಗರದ ಕಸಾಪ ಕನ್ನಡ ಭವನದಲ್ಲಿ ಭಾನುವಾರ ಇಲ್ಲಿನ ಸವಿಗಂಗಾ ಪ್ರಕಾಶನ ಪ್ರಕಟಿಸಿರುವ ಹಿರಿಯ ಸಾಹಿತಿ, ಸಂಶೋಧಕ ಟಿ.ಕೆ. ಗಂಗಾಧರ ಪತ್ತಾರ ಅವರ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬ್ರಿಟೀಷರು ಭಾರತಕ್ಕೆ ಬರದಿದ್ದರೆ ವಿಶ್ವ ಪ್ರಸಿದ್ಧ ಖಜುರಾಹೊ ಶಿಲ್ಪಗಳು ಮತ್ತು ಹಂಪಿಯ ಸ್ಮಾರಕಗಳ ಮಹತ್ವ ಗೊತ್ತಾಗುತ್ತಿರಲಿಲ್ಲ. ಇಂತಹ ಪ್ರಖ್ಯಾತ ಐತಿಹಾಸಿಕ ಸ್ಥಳಗಳ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ವಿಜಯನಗರ ಜಿಲ್ಲೆಯ ಕೊಗಳಿ, ಬಾಗಳಿ ಗ್ರಾಮಗಳ ಅದ್ಭುತ ‌ಸ್ಮಾರಕಗಳು ಕರ್ನಾಟಕ ಸಂಸ್ಕೃತಿಯ ಅಸ್ಮಿತೆಗಳಾಗಿವೆ ಎಂದು ಹೇಳಿದರು.
ಟಿ.ಕೆ ಗಂಗಾಧರ ಪತ್ತಾರ ಅವರು ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯ ಎಂದು ಶ್ಲಾಘಿಸಿದರು.
‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಕೃತಿ
ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಮಹತ್ವದ ಕೃತಿಯಾಗಿ ಸೇರ್ಪಡೆಗೊಂಡಿದೆ ಎಂದು‌ ಹರ್ಷ ವ್ಯಕ್ತ ಪಡಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಹುಬ್ನಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಅಧ್ಯಕ್ಷ ಭೀಮಸೇನ್ ಬಡಿಗೇರ್ ಅವರು ಮಾತನಾಡಿ, ಯಾವುದೇ ಸಮಾಜಕ್ಕೆ ಸಾಹಿತ್ಯವೇ ಬೆನ್ನೆಲುಬು. ಸಾಹಿತ್ಯ ರಚನೆಯ ಹಿಂದಿನ ಶ್ರಮವನ್ನು ವಿದ್ಯಾವಂತರು ಗಮನ ಹರಿಸುತ್ತಿಲ್ಲ ಎಂದು ವಿಷಾಧಿಸಿದರು.
ಜರ್ಮನಿಯ ಹರ್ಮನ್ ಮೊಗ್ಲಿಂಗ್ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಮಾತ್ರವಲ್ಲ ಜನಪದ, ದಾಸ ಸಾಹಿತ್ಯ, ಸಂಶೋಧನೆಗೂ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದರು.
ಕನ್ನಡ ಭಾಷೆಯ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವ ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು ಕೃತಿ, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಮಹತ್ವದ ಆಧಾರ ಗ್ರಂಥವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು


ಕೃತಿ ಪರಿಚಯಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ, ವಿಶ್ರಾಂತ ಅಧ್ಯಾಪಕ
ಕೆ.ಬಿ. ಸಿದ್ಧಲಿಂಗಪ್ಪ ಅವರು ಈ ಕೃತಿ ತುಂಬಾ ಮೌಲಿಕವಾದ್ದು ಇಲ್ಲಿ ಹದಿನಾರು ಜನ ಪಾಶ್ಚಾತ್ಯ ವಿದ್ವಾಂಸರ ಕೊಡುಗೆಯನ್ನು ಲೇಖಕರು ತುಂಬಾ ಮಹತ್ವ ಪೂರ್ಣ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ.. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪಶ್ಚಿಮದ ವಿದ್ವಾಂಸರ ಕೊಡುಗೆಗಳ ಇತಿಹಾಸವನ್ನು ಸಂಶೋಧನಾತ್ಮಕವಾಗಿ ಈ ಕೃತಿ ದಾಖಲಿಸಿರುವುದು ಗಮನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃತಿಯ ಕುರಿತಾಗಿ ವಿಮರ್ಶಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ ನಗರದ ಬಿಎಂಸಿಆರ್ ಎಸ್ ನೇತ್ರ ಭಂಡಾರದ ವೈದ್ಯಕೀಯ ನಿರ್ದೇಶಕ ಡಾ. ಪರಸಪ್ಪ ಬಂದ್ರಕಳ್ಳಿ ಅವರು ಕನ್ನಡ ಭಾಷೆ, ಲಿಪಿ, ಮುದ್ರಣ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಪಶ್ಚಿಮದ ಪ್ರಭಾವವನ್ನು ಸಮತೋಲನದ ದೃಷ್ಟಿಯಿಂದ ದಾಖಲಿಸಿರುವ ಕೃತಿ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು ಹಾಗೂ ಕ ಸಾ.ಪ ಗೌರದ ಕಾರ್ಯದರ್ಶಿಗಳಾದ ಡಾ.ಶಿವಲಿಂಗಪ್ಪ ಹಂದ್ಯಾಳ್ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ವಿಕಾಸ ವೇದಿಕೆ ಅಧ್ಯಕ್ಷ ಚಂದ್ರಕಾಂತ ಸೋನಾರ್, ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಜಿ. ಕಲಾವತಿ, ಕುಕನೂರು ವಿದ್ಯಾನಂದ ಗುರುಕುಲ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಕೃಷ್ಣರಾವ್ ರಂ. ಕುಲಕರ್ಣಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಗಂಗಾಧರ ಪತ್ತಾರ ಅವರನ್ನು ವಿವಿಧ ಸಂಘಟನೆಯ ಮುಖಂಡರು, ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಚಾರವಾದಿ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ(ಮಹಿಮ), ಲೇಖಕ ಕಲ್ಬುರ್ಗಿಯ ದತ್ತಾತ್ರೇಯ ವಿಶ್ವಕರ್ಮ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಹೂವಿನ ಹಡಗಲಿಯ ವಿಶ್ರಾಂತ ಮುಖ್ಯಗುರು ರವಿಂದ್ರ ವೀ ಕಮ್ಮಾರ, ಕಸಾಪ ಗೌರವ ಕೋಶಾಧ್ಯಕ್ಷ ಡಾ. ಬಸವರಾಜ ಗದಗಿನ, ಕೊಪ್ಪಳದ ಶಂಕರ ಜಾಧವ್, ಸಹಾಯಕ ಪ್ರಾಧ್ಯಾಪಕ ಪ್ರೊ. ತಿಪ್ಪೇರುದ್ರ ಕೊಟಗಿ,  ರಂಗತೋರಣದ ಪ್ರಭು ಕಪ್ಪಗಲ್, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ,
ಬಳ್ಳಾರಿ ಮೆಡಿಕಲ್ ಕಾಲೇಜಿನ ಪ್ರಯೋಗಾಲಯ ತಂತ್ರಜ್ಞ ವಿ.ಬಿ.ಕೃಷ್ಣಾಚಾರ್, ನಗರದ ಪುನರುಜ್ಜೀವನ ಅಧ್ಯಯನ ಕೇಂದ್ರದ ಶ್ರೀನಾಥ ಜೋಶಿ, ಗ್ರಂಥಪಾಲಕ ನವೀನ್ ಗಾಂಧಿ, ಕತೆಗಾರ ಮೋಕಾ ಭುವನೇಶ್, ಸಂಗೀತ ಅಧ್ಯಾಪಕ ಬೆಳಗಲ್ಲು ಹನುಮಂತು,  ಸಾಂಸ್ಕೃತಿಕ ಸಂಘಟಕ ಸುರೇಂದ್ರಸ್ವಾಮಿ,  ಕುಂಬಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಂಗೀತ ವಿದುಷಿ ಸುಧಾ ಮಂಜುನಾಥ್,
ಅವರು ಪ್ರಾರ್ಥಿಸಿದರು. ವಿಜ್ಞಾನ ಲೇಖಕ, ಕವಿ
ಡಾ. ಎಸ್ ಮಂಜುನಾಥ ಅವರು ಸ್ವಾಗತಿಸಿದರು. ಕೃತಿಕಾರ ಟಿ.ಕೆ ಗಂಗಾಧರ ಪತ್ತಾರ್ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕನ್ನಡ ಉಪನ್ಯಾಸಕ, ರಂಗ ಕಲಾವಿದ ಎಎಂಪಿ ವೀರೇಶಸ್ವಾಮಿ ನಿರೂಪಿಸಿದರು.
ಜಾನಪದ ಸಂಶೋಧಕಿ ಡಾ.ಎನ್. ಸಿದ್ದೇಶ್ವರಿ ವಂದಿಸಿದರು. ಸಮಾರಂಭದಲ್ಲಿ ಪತ್ತಾರ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು, ಸಾಹಿತ್ಯ ಆಸಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.