ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಥಿಗಳು ಜ್ಞಾನ ಸಂಪಾದನೆ  ಜತೆ ಮಾನವೀಯ ಮೌಲ್ಯವನ್ನು ವೃದ್ಧಿಸಿಕೊಳ್ಳ ಬೇಕು -ಡಾ. ರಮೇಶ್ ಎಂ. ಎನ್

ಮಲೆಬೆನ್ನೂರು, ಮೇ 24: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಜ್ಞಾನ ಸಂಪಾದನೆ ಜತೆ   ಮಾನವೀಯ ಮೌಲ್ಯವನ್ನು ವೃದ್ಧಿಸಿಕೊಳ್ಳ ಬೇಕು ಎಂದು ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು  ತಿಳಿಸಿದರು.
ಅವರು ಪಟ್ಟಣದ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಂತಿಮ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಎನ್ ಎಸ್ ಎಸ್ ,ರೆಡ್ ಕ್ರಾಸ್, ಸಾಂಸ್ಕೃತಿಕ ಚಟುವಟಿಕೆಗಳ, ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.            ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದರೆ ಮಾತ್ರ ಸಾಲದು. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜತೆಗೆ ಸಮಯ ಪ್ರಜ್ಞೆ,   ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಂದಿನ 10 ವರ್ಷಗಳಲ್ಲಿ ನಮ್ಮ ಭಾರತ ವಿಶ್ವಗುರು ಆಗಲಿದೆ.  ತಮ್ಮ ಪದವಿಯ ನಂತರ ಉಜ್ವಲ ಭವಿಷ್ಯಕ್ಕಾಗಿ ಸತತ ಪ್ರಯತ್ನ ಅತ್ಯಗತ್ಯ ಎಂದರು.
ಪದವಿ ಬಳಿಕ ಬಹಳಷ್ಟು ಜನರ ಜೀವನ ನೀರಿನಿಂದ  ಹೊರಬಿದ್ದ ಮೀನಿನಂತಾಗುವುದನ್ನು ಅಧ್ಯಾಪಕನಾಗಿ ಗಮನಿಸಿದ್ದೇನೆ ಎಂದ ಡಾ. ರಮೇಶ್ ಅವರು ಕೌಶಲ್ಯಗಳನ್ನು ಅಳವಡಿಸಿಕೊಂಡು ಯಶಸ್ವಿ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಯೋಗ ಪಡೆದ ಬಳಿಕ  ಸಮಾಜಮುಖಿಗಳಾಗಿ   ಉತ್ಕೃಷ್ಟ ಪ್ರಜೆಗಳಾಗಿ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳುವದರ ಜೊತೆಗೆ ಸತ್ಪ್ರಜೆಗಳಾಗಿ ನಿಮ್ಮ ಪೋಷಕರಿಗೂ ಶಿಕ್ಷಣ ಸಂಸ್ಥೆಗೆ ಹಾಗೂ ಉಪನ್ಯಾಸಕ ವರ್ಗದವರಿಗೆ ಕೀರ್ತಿಯನ್ನು ತನ್ನಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಪ್ಪ ಆರ್ ವಹಿಸಿದ್ದರು.                                      ಮುಖ್ಯ ಅತಿಥಿಗಳಾಗಿ ಶ್ರೀ ಬೀರಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ. ಆರ್ ಹಾಲೇಶಪ್ಪ, ಕಾರ್ಯದರ್ಶಿ ಪಿ.ರೇವಣಪ್ಪ, ಉಪಾಧ್ಯಕ್ಷ ಬಿ. ಎಚ್. ನಾಗೇಂದ್ರಪ್ಪ,  ನಿರ್ದೇಶಕರಾದ ಬಿ. ರೇವಣಸಿದ್ದಪ್ಪ, ಎಂ. ಆರ್ ಚಂದ್ರಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉಮಾ ಮಾನಿಬಣಕಾರ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ  ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ತಿಪ್ಪಣ್ಣ ಕಬ್ಬಾರ್ ಅವರು ಮಾತನಾಡಿದರು. ವಿದ್ಯಾರ್ಥಿನಿಯರಾದ ಗೌರಿ ಮತ್ತು ಕವಿತಾ ನಿರೂಪಿಸಿದರು. ವಾಣಿಜ್ಯ ವಿಭಾಗದ ಪ್ರಭು ವಂದಿಸಿದರು.

Leave a Reply

Your email address will not be published. Required fields are marked *