
ತಿರುವನಂತಪುರಂ/ಹೊಸಪೇಟೆ, ಜು. 9: ತಿರುವನಂತಪುರಂನಲ್ಲಿರುವ ಸಿಎಸ್ಐಆರ್–ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ಡಿಸಿಪ್ಲಿನರಿ ಸೈನ್ಸ್ ಅಂಡ್ ಟೆಕ್ನಾಲಜಿ (CSIR–NIIST)ನಲ್ಲಿ ಹಿರಿಯ ಪ್ರಧಾನ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಶಶಿಧರ್ ಬಿ. ಎಸ್. ಅವರಿಗೆ ಪ್ರತಿಷ್ಠಿತ ಚಿರಂತನ್ ರಸಾಯನಸಂಸ್ಥೆ (CRS) ಸಿಲ್ವರ್ ಮೆಡಲ್ 2026 ಪ್ರಶಸ್ತಿ ಲಭಿಸಿದೆ.
ಪಶ್ಚಿಮ ಬಂಗಾಳದ ಚಿರಂತನ್ ರಸಾಯನ ಸಂಸ್ಥೆ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ವಿಶಿಷ್ಟ ಸಂಶೋಧನಾ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಡಾ. ಶಶಿಧರ್ ಅವರು ಜೈವಿಕ ಕ್ರಿಯಾಶೀಲ ಸಣ್ಣ ಅಣುಗಳ (Small Molecules) ವಿನ್ಯಾಸ, ಪರಿಸರ ಸ್ನೇಹಿ ಲೋಹ-ರಹಿತ (Metal-Free) ಸಂಶ್ಲೇಷಣಾ ವಿಧಾನಗಳ ಅಭಿವೃದ್ಧಿ ಹಾಗೂ ನೈಸರ್ಗಿಕ ಉತ್ಪನ್ನಗಳಿಂದ ಪ್ರೇರಿತ ಔಷಧ ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಚಯಾಪಚಯ ಸಂಬಂಧಿತ ಕಾಯಿಲೆಗಳು (Metabolic Disorders), ಸೂಕ್ಷ್ಮಜೀವಿ ಸೋಂಕುಗಳು ಹಾಗೂ ಅಲ್ಝೈಮರ್ ಸೇರಿದಂತೆ ನರಕ್ಷಯಕಾರಿ ಕಾಯಿಲೆಗಳ ಚಿಕಿತ್ಸೆಗೆ ಹೊಸ ಔಷಧ ಅಭ್ಯರ್ಥಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಸಂಶೋಧನೆ ಗಮನಾರ್ಹವಾಗಿದೆ. ರಾಷ್ಟ್ರೀಯ ಮಹತ್ವದ ಹಲವಾರು ಆರೋಗ್ಯ ಸಂಶೋಧನಾ ಯೋಜನೆಗಳಿಗೆ ಅವರು ನಾಯಕತ್ವ ವಹಿಸಿದ್ದು, 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಖ್ಯಾತಿಯ ವೈಜ್ಞಾನಿಕ ಜರ್ನಲ್ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದರ ಜೊತೆಗೆ ಅನೇಕ ಪೇಟೆಂಟ್ಗಳನ್ನು ಪಡೆದಿದ್ದಾರೆ.
ಡಾ. ಶಶಿಧರ್ ಅವರ ಪೋಷಕರು ಹೊಸಪೇಟೆ ನಗರದ ಆಕಾಶವಾಣಿ ಬಳಿ ಇರುವ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ವಿಜಯನಗರ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಸಹಪಾಠಿಗಳು ಬಂಧು ಮಿತ್ರರು ಅಭಿನಂದಿಸಿದ್ದಾರೆ.
