ಹಿರಿಯ ಬಯಲಾಟ ಕಲಾವಿದೆ ಬಿ. ಸುಜಾತಮ್ಮ ನಾಡಿನ ಹೆಮ್ಮೆ -ವೆಂಕಟೇಶ ಪ್ರಸಾದ್

ಬಳ್ಳಾರಿ, ಮೇ 29: ಪ್ರತಿಷ್ಠಿತ ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಬಯಲಾಟ ಕಲಾವಿದೆ ಬಿ. ಸುಜಾತಮ್ಮ ಅವರು ನಾಡಿನ ಹೆಮ್ಮೆ ಎಂದು ಸಮಾಜ ಸೇವಕ, ಮುಖಂಡ ಬಿ. ವೆಂಕಟೇಶ ಪ್ರಸಾದ್ ಅವರು ಶ್ಲಾಘಿಸಿದರು.

ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆಯಡಿ ಗುರುವಾರ ಸಂಜೆ ಸಂಗನಕಲ್ಲು ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಸಾಂಸ್ಕೃತಿಕ ಕಲಾ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂಬತ್ತರ ಇಳಿವಯಸ್ಸಿನಲ್ಲೂ ಅನಾರೋಗ್ಯದ ನಡುವೆಯೂ ಬಯಲಾಟ ಕಲೆ ಮತ್ತು ಕಲಾವಿದರನ್ನು ತಮ್ಮ ಟ್ರಸ್ಟ್ ಮೂಲಕ ಪ್ರೋತ್ಸಾಹಿಸುತ್ತಿರುವುದು ಮಾದರಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಕಲೆಯನ್ನು ಉಳಿಸಲು ವಿಶೇಷವಾಗ ನಶಿಸುತ್ತಿರುವ ಕಲೆಗಳ ಪುನಶ್ಚೇತನಕ್ಕಾಗಿ ಸಂಘ ಸಂಸ್ಥೆಗಳಿಗೆ ಅನುದಾನ ನೀಡಿ ಉತ್ತೇಜಿಸುತ್ತಿದೆ ಎಂದು ತಿಳಿಸಿದರು.
ಟಿವಿ-ಮೊಬೈಲ್ ಐಪಿಎಲ್ ಆಕರ್ಷಣೆ ನಡುವೆ ಜಾನಪದ ಬಯಲಾಟ ಪ್ರದರ್ಶನ ಗಮನ ಸೆಳೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.


ಬಯಲಾಟ ಬಳ್ಳಾರಿಯಲ್ಲಿ ಹುಟ್ಟಿದ ಗಂಡುಮೆಟ್ಟಿನ ಕಲೆ. ಗ್ರಾಮೀಣರು ಬಯಲಾಟವನ್ನು ತಿಂಗಳಲ್ಲಿ ಕಲಿತು ಪ್ರದರ್ಶಿಸುತ್ತಿರುವುದು ಗಮನಾರ್ಹ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್ ಅವರು ಮಾತನಾಡಿ ಬಳ್ಳಾರಿ  ಪ್ರಾಕೃತಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ.  ನಾಡಿನ ಕಲೆ ಪರಂಪರೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಮೂಲಕ ಪರಿಚಯಿಸಿದ ಸಾಧಕರನ್ನು ಸ್ಮರಿಸುವ ಔಚಿತ್ಯವನ್ನು ವಿವರಿಸಿದರು.
ಬಯಲಾಟ ಕಲಾವಿದ, ಪತ್ರಕರ್ತ ಸಿದ್ಧರಾಮಪ್ಪ ಸಿರಿಗೇರಿ ಅವರು ಮಾತನಾಡಿ  ಜಿಲ್ಲೆಯ ಪತ್ರಕರ್ತರು ಎಂಟು ವರ್ಷಗಳ ಹಿಂದೆ ಶ್ರಮದಿಂದ  ಬಯಲಾಟವನ್ನು ಕಲಿತು ಪ್ರದರ್ಶಿಸುವ ಮೂಲಕ ಈ ಕಲೆಯನ್ನು ಪ್ರಚಾರ ಮಾಡಿದ್ದರು.   ಬಯಲಾಟ ಮಾಸ್ತರುಗಳಾದ ಹನುಮಾವಧೂತ,ರಂಗಾರೆಡ್ಡಿ ಮತ್ತು ಮುದ್ದಟನೂರು ತಿಪ್ಪೇಸ್ವಾಮಿ ಮತ್ತಿತರ ಶ್ರಮದಿಂದ ಯಶಸ್ವಿಯಾಗಿ ಬಯಲಾಟ ಪ್ರದರ್ಶಿಸಿದ್ದನ್ನು ಮೆಲುಕು ಹಾಕಿದರು.
ಬಡ ಕಲಾವಿದರು ಸಂಕಷ್ಟದಲ್ಲಿದ್ದಾರೆ. ನಾಲ್ಕೈದು ದಶಕಗಳ ಕಾಲ ಬಯಲಾಟವಾಡಿ ದಣಿದಿರುವ ಹಿರಿಯರನ್ನು ಗುರುತಿಸಿ  ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸರಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು,  ನಾಡಿನ ಕಲೆ ಸಂಸ್ಕೃತಿ ಉಳಿಸಲು ಹಾಗೂ ಕಲೆಗಳು ನಶಿಸಿಹೋಗಬಾರದು ಎಂದು ಇಲಾಖೆ ಅನುದಾನ ನೀಡಿ ಪ್ರೋತ್ಸಾಹಿಸುತ್ತಿದೆ. ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಈ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಗ್ರಾಪಂ  ಪಿಡಿಓ ಎಂ. ಆದಿಲಕ್ಷ್ಮಿ ಅವರು,  ಆಧುನಿಕ ಸಂದರ್ಭದಲ್ಲೂ ಮೂಲ ಬೇರುಗಳನ್ನು,  ಸಂಸ್ಕೃತಿಯ ಪರಂಪರೆಯನ್ನು ಮರೆಯಬಾರದು ಎಂದರು.
ಮುಖಂಡರಾದ ಸಿಂಧವಾಳ ಗಾದಿಲಿಂಗನಗೌಡ, ದುರ್ಗಾಪ್ರಸಾದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಉಪಾಧ್ಯಕ್ಷ  ಸಂಗನಕಲ್ಲು ವಿಜಯಕುಮಾರ್ ಮತ್ತಿತರರು ಮಾತನಾಡಿದರು.
ರೈತ ಮುಖಂಡ ಕೃಷ್ಣ, ಟ್ರಸ್ಟ್ ಅಧ್ಯಕ್ಷೆ ಬಿ.ಸುಜಾತಮ್ಮ,
ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೀರಾಪುರ ವೈ. ರಂಗಾರೆಡ್ಡಿ, ಎಚ್ ಎಂ ಹನುಮಾವಧೂತ ಮತ್ತಿತರರು ವೇದಿಕೆಯಲ್ಲಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಹಿರಿಯ ಬಯಲಾಟ ಕಲಾವಿದೆ ಅಂಬುಜಮ್ಮ ಅವರಿಂದ ಬಯಲಾಟ ರಂಗ ಗೀತೆಗಳು, ಸಂಗನಕಲ್ಲು ಲಿಂಗಣ್ಣ ಸ್ವಾಮಿ ಮತ್ತು ತಂಡದಿಂದ ತತ್ವಪದ ಗಾಯನ, ಬಳ್ಳಾರಿಯ ಆರ್ ರಾಜೇಶ್ ಕಲಾ ತಂಡದಿಂದ ಸಮೂಹ ನೃತ್ಯ ಮತ್ತು ಬಳ್ಳಾರಿಯ ಡಿ.ಯರ್ರಿಸ್ವಾಮಿ ಕಲಾ ತಂಡದಿಂದ ರಾಮಾಯಣ ಬಯಲಾಟ ಪ್ರದರ್ಶನ ಗಮನ ಸೆಳೆಯಿತು.
ಟ್ರಸ್ಟ್ ಕಾರ್ಯದರ್ಶಿ ಬಿ.ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಬಯಲಾಟ ಮಾಸ್ತರರಾದ ಮುದ್ದಟನೂರು ಹೆಚ್. ತಿಪ್ಪೇಸ್ವಾಮಿ ನಿರೂಪಿಸಿದರು. ಗುಡದೂರು ಎ ಪಾಂಡುರಂಗ, ಟ್ರಸ್ಟ್ ಸದಸ್ಯೆ ಯರ್ರೆಮ್ಮ ಕು. ಕುಸುಮಾ ನಿರ್ವಹಿಸಿದರು.  ಸಂಗನಕಲ್ಲಿನ  ಜೋಗಿನ ಚಂದ್ರಪ್ಪ ವಂದಿಸಿದರು.

Leave a Reply

Your email address will not be published. Required fields are marked *