
ಬಳ್ಳಾರಿ, ಮೇ 27: ಹೊಸದಾಗಿ ಸಚಿವ ಸಂಪುಟ ಪುನರ್ರಚನೆಯಾದರೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನನ್ನ ಹಾಗೂ ಜಿಲ್ಲೆಯ ಶಾಸಕರ ಅಭಿಪ್ರಾಯ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿಯ ಮಹಾನಗರ ಪಾಲಿಕೆಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಿಎಂ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ ಶಾಸಕಾಂಗ ಪಕ್ಷದ ಸಭೆಯ ಬಗ್ಗೆಯೂ ಕರೆ ಬಂದಿಲ್ಲ, ಆದರೆ ಸಿಎಂ ಬದಲಾವಣೆಗೆ ಸಂಬಂಧಿಸಿ ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದರು.
ಸಚಿವ ಸಂಪುಟ ಪುನರ್ರಚನೆ ಅಥವಾ ಸಿಎಂ ಬದಲಾವಣೆ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ತೀರ್ಮಾನವೇ ಅಂತಿಮ, ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಯಾಜ್ ಅಹ್ಮದ್, ಸುಬ್ಬರಾಯುಡು, ಮೊಹಮ್ಮದ್ ಭಾಯ್, ಡಿ.ಸೂರಿ, ಬಿಆರ್ ಎಲ್ ಸೀನಾ, ಅಲ್ಲಾಬಕಷ್, ಹೊನ್ನಪ್ಪ, ಕಣೇಕಲ್ ಮೆಹಬೂಬಸಾಬ, ಪಾಲಿಕೆಯ ಸದಸ್ಯ ಜಬ್ಬಾರ್ ಮತ್ತಿತರರು ಇದ್ದರು.
