ಅನುದಿನ ಕವನ- ೧೯೩೧, ಹಿರಿಯ ಕವಿ: ಮಹಿಮ, ಬಳ್ಳಾರಿ

ಹೇಳದೇ ಹೋಗುತ್ತಿರುವೆನಲ್ಲ ಎನ್ನುವ ಯಾತನೆ ಇಳೆ ತೊರೆಯುವ ಜೀವಿಗೆ..
ಕಂಗಳು ಒದ್ದೆಯಾಗಿ ಹನಿಗಳು ತೊಟ್ಟಿಕ್ಕುತ್ತಿವೆ ಸಂಗಾತಿಗಳ ನೆನೆನೆನೆದು..
ಪಯಣ ಅನಿವಾರ್ಯ ..
ಹೇಳದೇ ಕೇಳದೇ ತೆರಳುವ ಪಯಣ..
ಜೀವಿಯ ಅಂತಿಮ ಯಾನ..
ಮಣ್ಣಿನ ಸೆಳೆತವೇ ಹಾಗೆ..ಮಣ್ಣು ದೇಹವ ಬಯಸಿಬಿಟ್ಟರೆ ಅರೆಕ್ಷಣ ಸಾಕು…
ಮಣ್ಣಿನ ಋಣ ಮುಗಿದಾಗ
ಸಕಲ ದೈವಗಳು,ಮಾಡಿದ ಪುಣ್ಯಗಳು ಮೌನತಾಳಿಬಿಡುತ್ತವೆ..
ಹಾದಿ ಕೈ ಬೀಸಿ ಕರೆಯುವಾಗ ನಡೆಯಲೇಬೇಕಲ್ಲ..
ಭಾರದ ಬದುಕ ಬಿಸಾಡಿ ನಿರಮ್ಮಳಾಗಿ ನಡೆವಾಗ
ಆತನ ನೆರಳು ಸಹ ಆತನ ಜೊತೆಗಿಲ್ಲ..
ಬದುಕು ಇಷ್ಟೇ..
ಹೋದಾತ ನಮ್ಮನ್ನು ನೋಡುತ್ತಿರುವನೇನೋ?
ನಾವಾತನ ನೋಡಲಾಗುತ್ತಿಲ್ಲ..ಅದೇ ನೋವು ಅದೇ ದುಃಖ..
ನೆನಪುಗಳಲ್ಲಿ‌ಹುಡುಕಿ ಮತ್ತೆ ಮತ್ತೆ ಮರೆಯಾದವರ ಜೊತೆ ಸೇರಿ ಮೌನ ಸಂಭಾಷಣೆ ಆರಂಭಿಸೋಣ..
ಮೌನಕ್ಕೆ ಸಿಗದವರಾರು?
ಮೌನಕ್ಕೆ ಮನಸೋಲದವರಾರು?


-ಮಹಿಮ, ಬಳ್ಳಾರಿ

Leave a Reply

Your email address will not be published. Required fields are marked *