ಅನುದಿನ ಕವನ-೧೯೫೫, ಕವಯತ್ರಿ(ತೆಲುಗು ಮೂಲ): ಮರ್ಸಿ ಮಾರ್ಗರೇಟ್‌, ಕನ್ನಡಕ್ಕೆ :ಡಾ. ಶಿವಕುಮಾರ್‌ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಭಾರತದೇಶ ರಾತ್ರಿ ಮನೆಗೆ ಬಂದಿತ್ತು….

ಭಾರತದೇಶ ರಾತ್ರಿ ಮನೆಗೆ ಬಂದಿತ್ತು….

ಭಾರತ ದೇಶ ರಾತ್ರಿ ನನ್ನ ಮನೆಗೆ ಬಂದಿತ್ತು
ಬಾಗಿಲ ತಟ್ಟಲಿಲ್ಲ
ಮಣ್ಣಿನ ವಾಸನೆಯ ಹಾಗೆ ಒಳಗೆ ಬಂದಿತ್ತು

ತಲೆಯ ಮೇಲೆ ಹಿಮಾಲಯದ ಮಂಜು
ಕೈಗಳಲಿ ಜೀವನದಿಗಳ ನೀರು
ಪಾದಗಳ ಮೇಲೆ ಕನ್ಯಾಕುಮಾರಿಯ ಮರಳು

ನಾ ಕೇಳಿದೆ
“ಇಷ್ಟುದೂರ ಯಾಕೆ ಬಂದೆ?”

ನಕ್ಕಿತು.

ಆ ಕ್ಷಣದಲೇ
ಭಾರತದೇಶ ಒಂದು ದೊಡ್ಡ ಮನೆಯಾಗಿ ಕಾಣಿಸಿತು
ಆ ಮನೆಗೆ ಸಾವಿರ ಬಾಗಿಲುಗಳು
ಸಾವಿರ ಕಿಟಕಿಗಳು
ಸಾವಿರಾರು ಭಾಷೆಗಳು
ಸಾವಿರ ಹಸಿವುಗಳು
ಸಾವಿರಾರು ನೆನಪುಗಳು

ಒಂದು ಮೂಲೆಯಲಿ ದಲಿತ ಬಾಲಕ
ಗೋಡೆ ಮೇಲೆ ತನ್ನ ಹೆಸರ ಬರೆಯುತ್ತಿದ್ದಾನೆ
ಮತ್ತೊಂದು ಮೂಲೆಯಲಿ ಒಬ್ಬ ಮುಸ್ಲಿಂ ಹುಡುಗಿ
ತನ್ನ ತಾಯಿ ಸೆರಗಿನಲ್ಲಿ
ಚಿಕ್ಕ ಬಾವುಟವ ಹೊಲೆಯುತ್ತಿದ್ದಾಳೆ
ಚರ್ಚಿನ ಕಿಟಕಿಯ ಬಳಿ ಒಬ್ಬ ವೃದ್ಧೆ
ದೇಶಕ್ಕಾಗಿ ಪ್ರಾರ್ಥಿಸುತ್ತಿದ್ದಾಳೆ
ಒಬ್ಬ ಆದಿವಾಸಿ ಯುವಕ ಕಾಡಿಗೆ ಕಿವಿಗೊಟ್ಟು
ಭೂಮಿಯ ಎದೆಬಡಿತ ಕೇಳುತ್ತಿದ್ದಾನೆ
ಆಗ
ಮನೆಯ ನಡುವಿನ ಗಡಿಯಾರ
ಒಮ್ಮೆಲೆ ನಿಂತಿತು

ಯಾರೋ ಕೇಳಿದರು
“ ಈ ಮನೆಯಲಿ ಅಸಲಿ ಭಾರತೀಯ ಯಾರು?”
ಮನೆಯು ನಕ್ಕಿತು
ಗೋಡೆಗಳು ನಕ್ಕವು
ಕಿಟಕಿಗಳು ನಕ್ಕವು
ಕೊನೆಗೆ
ಸಂವಿಧಾನವೂ ನಕ್ಕಿತು
“ ಈ ಮನೆಯ ಪ್ರೇಮಿಸುವವನು ಅದರ ಬಾಗಿಲ ಮುಚ್ಚಲಾರ”
ಎಂದಿತು

ಆ ನಗುವಿನಲಿ
ಸಾವಿರ ಭಾಷೆಗಳು ಅರಳಿದವು

ಬಣ್ಣಗಳು
ತಮ್ಮ ತಮ್ಮ ಮನೆಗಳಿಂದ ಹೊರಬಂದು
ಒಂದನ್ನೊಂದು ತಬ್ಬಿಕೊಂಡವು
ಬಾವುಟದ ನಡುವಿನ ಅಶೋಕ ಚಕ್ರ
ತಿರುಗತೊಡಗಿತು
ಅದು ತಿರುಗುವ ಪ್ರತಿಸಲವೂ
ಒಂದು ಹೊಸ ಭಾರತದೇಶ ಹುಟ್ಟಿತು

ಒಂದರಲ್ಲಿ
ಬುದ್ಧ ನಡೆಯುತ್ತಿದ್ದಾನೆ
ಮತ್ತೊಂದರಲ್ಲಿ
ಕಬೀರ ಹಾಡುತ್ತಿದ್ದಾನೆ
ಇನ್ನೊಂದರಲ್ಲಿ
ಅಂಬೇಡ್ಕರ್‌ ಒಂದು ಪುಸ್ತಕವ ತೆರೆಯುತ್ತಿದ್ದಾನೆ
ಕೊನೆಯ ಪುಟದ ಹತ್ತಿರ ನನ್ನ ಹೆಸರು ಕಾಣಿಸಿತು
ಅದರ ಪಕ್ಕದಲ್ಲೇ ಲಕ್ಷಾಂತರ ಹೆಸರುಗಳು
ಆ ಎಲ್ಲವನ್ನೂ
ಒಂದೇ ಇಂಕಿನಲ್ಲಿ ಬರೆಯಲಾಗಿದೆ

ಸಂವಿಧಾನ
ನನ್ನ ಕೈಗೆ ಬಂದು ಒಂದು ಪುಟ್ಟ ಹಕ್ಕಿಯಾಯಿತು
ಅದರ ರೆಕ್ಕೆಗಳ ಕೆಳಗೆ ನ್ಯಾಯವು ನಿದ್ರಿಸುತ್ತಿದೆ
ಸ್ವತಂತ್ರ್ಯ ಕಣ್ಣತೆರೆದು ಆಗಸವ ನೋಡುತ್ತಿದೆ
ಸಮಾನತೆಯು
ಒಂದೇ ಬಾವಿಯಲ್ಲಿ ಎರಡೂ ಕೈಗಳಿಂದ ನೀರ ಸೇದುತ್ತಿದೆ
ಬ್ರಾತೃತ್ವವು ರಾತ್ರೋ ರಾತ್ರಿಗೆ
ಗೋಡೆಗಳೆಲ್ಲವಕ್ಕೆ
ಬಾಗಿಲುಗಳ ಮಾಡಿತು

ನಾನು
ಒಂದು ಹಿಡಿ ಮಣ್ಣನ್ನು ತೆಗೆದುಕೊಂಡೆ
ಅದರಲ್ಲಿ
ದೇವಾಲಯದ ಶ್ಲೋಕವಿತ್ತು
ಚರ್ಚಿನ ಗಂಟೆ
ಮಸೀದಿಯ ಕೂಗಿತ್ತು
ಬೌದ್ಧವಿಹಾರದ ನಿಶ್ಯಬ್ದ
ಆದಿವಾಸಿಯ ಡಪ್ಪು ಇತ್ತು
ರೈತನ ಬೆವರು
ಸೈನಿಕನ ಹೆಜ್ಜೆಯ ಸಪ್ಪಳವಿತ್ತು
ಕವಿತೆ ಬರೆವ ಹುಡುಗಿಯ
ಎದೆಯ ಮಿಡಿತವಿತ್ತು.

ಆ ಮಣ್ಣ
ನನ್ನ ಹಣೆಗಿಟ್ಟುಕೊಂಡೆ
ಭಾರತದೇಶ ನನ್ನ ಹಣೆಗೆ ಮುತ್ತಿಟ್ಟಿತು

“ ನನ್ನನ್ನು ಕಾಪಾಡು” ಎಂದು ಅದು ಕೇಳಲಿಲ್ಲ
“ ನನ್ನನ್ನು ಪ್ರೇಮಿಸು “ ಅಂತ ಕೂಡಾ ಹೇಳಲಿಲ್ಲ
ಅದರ ಕಂಗಳಲ್ಲಿ ಒಂದು ಬೆಳಕು
ಆ ಬೆಳಕು
ತ್ರಿವರ್ಣ ಧ್ವಜದ ಮೇಲೆ ಬಿತ್ತು
ಆಕಾಶದಿಂದಿಳಿದು
ನನ್ನ ಮನೆ ನಡುವೆ ನಿಂತಿತು
ಆಗ ಅರ್ಥವಾಯಿತು

ದೇಶ
ಸರಿಹದ್ದುಗಳ ನಡುವೆ ಬದುಕುವುದಲ್ಲ
ಮನುಷ್ಯರು ಒಬ್ಬರ ನೋವನ್ನ ಮತ್ತೊಬ್ಬರು
ಭರಿಸುವಂತಹ ಜಾಗದಲ್ಲೇ ದೇಶವಿರುತ್ತದೆ

ರಾತ್ರಿ ಭಾರತದೇಶ ನನ್ನ ಮನೆಯೊಳಗೇ ನಿದ್ರಿಸಿತು
ಬೆಳಿಗ್ಗೆ ಎದ್ದು ನೋಡೋವೇಳೆಗೆ
ನನ್ನ ಮನೆ ಕಿಟಕಿಯ ಹೊರಗೆ
ಪ್ರತಿ ಮರದ ಮೇಲೂ
ತ್ರಿವರ್ಣ ಧ್ವಜ
ಪ್ರತಿ ಮನುಷ್ಯನ ಮುಖದಲ್ಲಿ
ಒಂದು ಪುಟ್ಟ ಭಾರತದೇಶ ನಗುತ್ತಿದೆ

ನನ್ನ ಎದೆಯಲ್ಲಿ ಮಾತ್ರ
ಅಶೋಕ ಚಕ್ರ ಇನ್ನೂ ತಿರುಗುತ್ತಲೇ ಇದೆ
ತಿರುಗುತ್ತಲೇ ಇದೆ …
ತಿರುಗುತ್ತಲೇ ಇದೆ…
ಜೆನ್‌ ಜಿ ಮಕ್ಕಳ ಮುಷ್ಟಿಗಳಲ್ಲಿ
ಅವರ ಪ್ರಶ್ನೆಗಳ ನಡುವೆ ನಿರ್ಭಯವಾಗಿ ಓಡಾಡುತ್ತಾ
ನನ್ನ ದೇಶ
ಇನ್ನೂ ಇನ್ನೂ ಹೊಸದಾಗಿ ಕಿರುನಗೆಯೊಂದಿಗೆ
ಮತ್ತೆ ಹುಟ್ಟುತ್ತಿದೆಯೇನೋ ಎನಿಸಿತು

ತೆಲುಗು ಮೂಲ: ಮರ್ಸಿ ಮಾರ್ಗರೇಟ್‌

ಕನ್ನಡಕ್ಕೆ :ಡಾ.  ಶಿವಕುಮಾರ್‌ ಕಂಪ್ಲಿ, ದಾವಣಗೆರೆ

 

Leave a Reply

Your email address will not be published. Required fields are marked *