
ಚನ್ನಪಟ್ಟಣ(ರಾಮನಗರ ): ಅನನ್ಯ ಸಂಸ್ಥೆಯ ದಶಮಾನೋತ್ಸವದ ಸಂಭ್ರಮ ಹಾಗೂ ಬೊಂಬೆ ನಾಡಿನ ಬೆಳಕು ಪುಸ್ತಕ ಬಿಡುಗಡೆ ಸಮಾರಂಭವ ನಗರದ ಶತಮಾನೋತ್ಸವ ಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಳೆದ ಹತ್ತು ವರ್ಷಗಳಲ್ಲಿ ನಾಡಿನ 200 ಜನ ಯುವಕ ಯುವತಿಯರಿಗೆ ದೇಸಿ ಕಲೆ ಮತ್ತು ಬೆಳ್ಳಿತೆರೆ ಹಾಗೂ ಮಾಧ್ಯಮ ತರಬೇತಿಯನ್ನು ಅನನ್ಯ ಸಂಸ್ಥೆ ನೀಡಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಪ್ರಸ್ತುತ ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಸಿನಿಮಾ ಕ್ಷೇತ್ರ ಹಾಗೂ ನಾನಾ ಸ್ವಯಂ ಉದ್ಯೋಗ ಗಳಲ್ಲಿ ತೊಡಗಿಸಿಕೊಂಡು ತಮ್ಮ ಬದು ಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಹಾಗೂ ಇವರಿಗೆ ತರಬೇತಿ ನೀಡಿದ ಉಪನ್ಯಾಸಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ವೈಭವ ವನ್ನು ಅನಾವರಣಗೊಳಿಸಿತು. ಕನ್ನಡ ಬಾವುಟಗಳು ಹಾಗೂ ಕನ್ನಡ ಶಾಲುಗಳು ರಾರಾಜಿಸಿದವು.
ಕನ್ನಡ ಉಳಿಸಿ ಬೆಳೆಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು. ಸಭಾಂಗಣದಲ್ಲಿ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಕನ್ನಡದ ಅಸ್ಮಿತೆ, ಭಾಷಾ ಪ್ರಜ್ಞೆ ಹಾಗೂ ಸಂಸ್ಕೃತಿ ಸಭಾಂಗಣದಲ್ಲಿ ಮಾರ್ದನಿಸಿತು.
ಅನನ್ಯ ಸಂಸ್ಥೆಯ ಮಾರ್ಗದರ್ಶಕರಾದ ನಾದಬ್ರಹ್ಮ ಡಾ.ಹಂಸಲೇಖ ಮಾತನಾಡಿ, ಅನನ್ಯ ಸಂಸ್ಥೆಯು ಇನ್ನಷ್ಟು ಅನನ್ಯವಾಗಿ ಬೆಳೆಯಲಿ, ಅನನ್ಯ ಕನ್ನಡವಾಗಲಿ ಎಂದು ಹಾರೈಸಿದರು. ಅವರ ಸಾಹಿತ್ಯ ಮತ್ತು ಸಂಯೋಜನೆಯಲ್ಲಿ ಮೂಡಿಬಂದ ಹೊಸ ಕನ್ನಡ ಗೀತೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರ ಮನಸೂರೆಗೊಂಡವು. ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕನ್ನಡ ಪ್ರಜ್ಞೆ ಕನ್ನಡ ನಾಡಿನ ಚಿಂತಕರು, ವಿಚಾರವಾದಿಗಳು ಮತ್ತು ಭಾಷಾ ಪ್ರಜ್ಞೆಯ ಮಹತ್ವ, ಕನ್ನಡ ಚರಿತ್ರೆ ಹಾಗೂ ಸಾಹಿತ್ಯ ಪರಂಪರೆಯ ಕುರಿತು ವಿವರಿಸಿದರು.
ಚಿಂತಕ ಹಾಗೂ ಶಿಕ್ಷಣ ತಜ್ಞರಾದ ನಿರಂಜನ್ ಆರಾಧ್ಯ ಶಿಕ್ಷಣವು ವ್ಯಕ್ತಿಯ ಬದುಕಿಗೆ ನೀಡುವ ಬೆಳಕಿನ ಕುರಿತು ಮಾತನಾಡಿ, ತಾಯಿಭಾಷೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಜವಾಬ್ದಾರಿ ನೆನಪಿಸಿದರು.

ಹಿರಿಯ ಹೋರಾಟಗಾರ ಡಿ. ಶಿವಶಂಕರ್ ಮಾತನಾಡಿ, ಚಳವಳಿಗಳು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗದೆ ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಕಾಪಾಡುವ ಚಳವಳಿ ಗಳಾಗಬೇಕು ಎಂದು ಕರೆ ನೀಡಿದರು.
ಖ್ಯಾತ ಗೀತರಚನಾಕಾರ ಕವಿರಾಜ್ ಅವರು ಕನ್ನಡ ಸಿನಿಮಾ ಹಾಗೂ ಕನ್ನಡ ಭಾಷೆಯ ಕುರಿತು ಮಾತನಾಡಿ, ಕನ್ನಡ ಸಿನಿಮಾಗಳನ್ನು ಪ್ರೀತಿಸುವ ಮತ್ತು ಕನ್ನಡ ಭಾಷೆಯನ್ನು ಗೌರವಿಸುವಂತೆ ಮನವಿ ಮಾಡಿದರು.
ಕನ್ನಡಾಭಿಮಾನಿ ಭುವನೇಶ್ ಅವರು ಡಿಜಿಟಲ್ ಮಾಧ್ಯಮ ಹಾಗೂ ಹೊಸ ತಂತ್ರಜ್ಞಾನಗಳ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡವನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.
ಸಮಾರಂಭದಲ್ಲಿ ಇಂದಿರಾ ಕೃಷ್ಣಪ್ಪ, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಕಾಳೇಗೌಡ ನಾಗವಾರ, ಡಾ. ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ವೇದಿಕೆಯಲ್ಲಿ ಲತಾ ಹಂಸಲೇಖ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಳ್ಳಾರಿ ಸಿ.ಮಂಜುನಾಥ, ಸಾಹಿತಿ ಡಾ.ಅಮ್ಮಸಂದ್ರ ಸುರೇಶ್, ಪತ್ರಕರ್ತ ಮಂಜೇಗೌಡ, ಡಾ. ಎನ್. ಜಿ. ಲೋಕನಂದ, ರವೀಂದ್ರನಾಥ ಸಿರವರ, ಈ. ಧನಂಜಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ರಾಂಪುರ ಸ್ವಾಗತಿಸಿದರು. ಅಧ್ಯಕ್ಷೆ ರಂಜಿತಾ ರಾಜೇಶ್ ನಿರೂಪಿಸಿದರು. ಡಾ. ಈಶ್ವರ್, ದುರುಗಪ್ಪ ಹೊಸಮನಿ, ಅಮರೇಶ್ ಸಿ ಸಿರಿಗೆರೆ, ಮಂಡ್ಯ ನಿರಂಜನ್ ಬೌದ್ ಮತ್ತಿತರರು ನಿರ್ವಹಿಸಿದರು.
