ಕನ್ನಡ ಪಾಠ ಮುಗಿಸಿದ ಮ.ಬ.ಸೋಮಣ್ಣ ಮಾಸ್ತರ್:
ಶಿಷ್ಯಂದಿರ ನೆನಪಲ್ಲಿ ಉಳಿದ ಕನ್ನಡ & ನಾಟಕಮೇಷ್ಟ್ರು

ಕಂಪ್ಲಿಯ ಷಾ.ಮಿಯಾಚಂದ್ ಹೈಸ್ಕೂಲ್ ಮತ್ತು ಸತ್ಯನಾರಾಯಣ ಪೇಟೆಯ ಸಹಿಪ್ರಾ ಶಾಲೆಗಳಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ, ಮ.ಬ.ಸೋಮಣ್ಣ ಎಂದೇ ಹೆಸರಾದ ಮಯಚಾರ್ ಬಡಿಗೇರ್ ಸೋಮಣ್ಣ ಇವರು ರಂಗಭೂಮಿಯ ಅನನ್ಯ ಸೇವಕರು.
ಮ.ಬ.ಸೋಮಣ್ಣ ಮಾಸ್ತರ್ ಶಿಷ್ಯಂದಿರ ತಲೆಯ ಮೇಲಿನ ‘ಕನ್ನಡದ ಕಳಸ’ ಅವರು.
ಇವರ ರಂಗಭೂಮಿಯ ಸಾಧನೆಗಾಗಿ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ದೊರಕಿದ್ದು, ಸೋಮಣ್ಣ ಮಾಸ್ತರರ ಶಿಷ್ಯಂದಿರಿಗೆ, ರಂಗಕರ್ಮಿಗಳಿಗೆ ತುಂಬಾನೇ ಸಂತಸ ತಂದಿತ್ತು.
ಅವರು 6ನೇವಯಸ್ಸಿನಲ್ಲೆ ಚಿಕ್ಕಪಾತ್ರದ ಮೂಲಕ ಬಣ್ಣ ಹಚ್ಚಿಕೊಂಡು ರಂಗಭೂಮಿಯ ನಂಟು ಬೆಳೆಸಿಕೊಂಡ ಮ.ಬ.ಸೋಮಣ್ಣ ಮಾಸ್ತರ್ ಅವರು ಈವರೆಗೂ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
25ನಾಟಕಗಳನ್ನು ರಚಿಸಿ, 30ನಾಟಕಗಳಲ್ಲಿ ಅಭಿನಯಿಸಿ, 34ನಾಟಕಗಳನ್ನು ರಾಜ್ಯ, ಅಂತರರಾಜ್ಯಗಳಲ್ಲಿ ನಿರ್ದೇಶಿಸಿದ್ದಾರೆ.
ಸುಮಾರು 25 ಕಥೆಗಳನ್ನು, 4ರಂಗ ಕೃತಿಗಳನ್ನು, 1000ಕ್ಕೂ ಹೆಚ್ಚು ರಂಗಗೀತೆಗಳನ್ನು ರಚಿಸಿದ ಕೀರ್ತಿ ಇವರದಾಗಿದೆ. ಇವರ ರಂಗಗೀತೆಗಳು, ಸಣ್ಣ ಗೀತೆಗಳು ದೂರದರ್ಶನ, ಆಕಾಶವಾಣಿಗಳಲ್ಲಿ ಪ್ರಸಾರಗೊಂಡಿವೆ.

ಶೀಲಾವತಿ, ಅವ್ವಣ್ಣೆವ್ವ ಹಾಗೂ ವಿಶ್ವಬಂದು ಬಸವಣ್ಣ ಇವರ ರಂಗಕೃತಿಗಳಾಗಿವೆ. ಅರುಣೋದಯ, ಉದಯ, ಹೊಂಗಿರಣ, ಸಸ್ಯ ಸಂಕುಲ, ಚಿತ್ರ ದರ್ಪಣ, ಜ್ಞಾನಸಿಂಧು, ಕಲಾಮೃತ, ಕಲಾನಿಧಿ ಇವರ ಸಂಪಾದನೆಯ ಸ್ಮರಣ ಸಂಚಿಕೆಗಳಾಗಿವೆ.
ಅತ್ಯುತ್ತಮ ತಬಲವಾದಕರಾಗಿದ್ದು ವೃತ್ತಿ ಮತ್ತು ಹವ್ಯಾಸಿ ನಾಟಕಗಳಿಗೆ ಸಂಗೀತ ಹಾಗೂ ನಾಟಕ, ಸಂಗೀತ ಕಾರ್ಯಕ್ರಮಗಳಲ್ಲಿ ತಬಲ ವಾದನ ನೀಡಿದ್ದಾರೆ.
ಶೀಲಾವತಿ, ಊರುಕೇರಿ, ರಂಗಾಂತರಂಗ, ವಿಲಾಸ, ಅಂಗುಲಿಮಾಲ, ಸಂಗ್ಯಾ ಬಾಳ್ಯಾ, ಜೋಕುಮಾರಸ್ವಾಮಿ, ಹರಿದ್ರಾ ಕುಂಕುಮ, ಅಂತಃಚಕ್ಷು ತೆರೆಯಿತು, ಕತ್ತಲೆ ಬೆಳಕು, ವೀರಕೇಸರಿ, ಅರ್ಪಣಾ, ಸ್ತ್ರೀ ರತ್ನ ರಾಮಾಯಣ, ಸಮರ್ಪಣ, ಆತ್ಮ ಯಾವ ಕುಲ?, ಸಾಮ್ರಾಟ್ ಆಶೋಕ ಮೊದಲಾದ ನಾಟಕಗಳಲ್ಲಿ, ವಿಜಯನಗರ ವೈಭವ ಕರ್ನಾಟಕ ವೈಭವ ಧ್ವನಿ ಬೆಳಕು ಕಾರ್ಯಕ್ರಮಗಳಲ್ಲಿಯೂ ನಾನಾ ಪಾತ್ರಗಳನ್ನು ಅಭಿನಯಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಹುಮಾನಗಳನ್ನು ಗಳಿಸಿದ್ದಾರೆ.
ಅರಣ್ಯರೋಧನ, ಸಾಕ್ಷಿಕಲ್ಲು, ವೀರಕೇಶರಿ ಹರಿಶ್ಚಂದ್ರ, ಕುಸುಮ, ಶಿವನೊಲುವೆ, ಕತ್ತಲೆ ಕರಗಿತು, ಕರಿಭಂಟ ಸೇರಿ ನಾನಾ ನಾಟಕಗಳನ್ನು ಯಶಸ್ವಿ ನಿರ್ದೇಶಿಸಿ ರಂಗಜನಪ್ರಿಯತೆಗಳಿಸಿದ್ದಾರೆ.

ಮರಿಯಮ್ಮನಹಳ್ಳಿಯಲ್ಲಿ ಲಲಿತ ಕಲಾರಂಗ, ಬೀದಿ ನಾಟಕ ತಂಡ, ಸುರಕ್ಷಿತ ತಾಯ್ತನ ಆಂದೋಲನ ತಂಡ, ಶಿಕ್ಷಕರ ಕಲಾ ತಂಡ, ಸಾಕ್ಷರತಾ ಕಲಾತಂಡ ಸೇರಿ ನಾನಾ ಕಲಾತಂಡಗಳನ್ನು ರಚಿಸಿ ಅದರ ಕಾರ್ಯದರ್ಶಿ, ನಿರ್ದೇಶಕರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. 100ಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿ ಗಮನಸೆಳೆದಿದ್ದಾರೆ.
ಕಂಚಿನ ಕಂಠದ ಇವರು ಅನೇಕ ಪುರಾಣಗಳ ಪ್ರವಚನ, ರಂಗತರಬೇತಿ ಶಿಬಿರ ಸೇರಿ ನಾನಾ ಶಿಬಿರ, ಕಾರ್ಯಾಗಾರಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ತರಗತಿಗಳಲ್ಲಿ ಆಕರ್ಷಕ ವ್ಯಾಕರಣ, ಹಳೆಗನ್ನಡ ಬೋಧನೆ, ಪದ್ಯ ಬೋಧನೆ, ಬೋಧನೆಯಲ್ಲಿ ಅಭಿನಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಮನಸೆಳೆದಿದ್ದಾರೆ. ಉಪನ್ಯಾಸ, ಸಭೆ ಸಮಾರಂಭಗಳಲ್ಲಿ ಯಶಸ್ವಿ ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಉಡುಪಿಯ ಅಖಿಲ ಭಾರತ ನಾಟಕೋತ್ಸವದಲ್ಲಿ ರಾಷ್ಟ್ರಮಟ್ಟದ ಉತ್ತಮ ನಟ ಪ್ರಶಸ್ತಿ ಸೇರಿ ಆದರ್ಶ ಶಿಕ್ಷಕ, ಉತ್ತಮ ಶಿಕ್ಷಕ, ಉತ್ತಮ ಪೋಷಕ ನಟ ಪ್ರಶಸ್ತಿಗಳು, ಟಿ.ಪಿ.ಕೈಲಾಸಂ, ರಂಗಭಾರ್ಗವ, ರಂಗತೋರಣ, ಕನ್ನಡ ಕಲಾಭಿಮಾನಿ ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ, ಕಮಲಾಪುರ ಸಾಹಿತ್ಯ ಸಮ್ಮೇಳನಾಧ್ಯಕ್ಷತೆವಹಿಸಿದ ಅತ್ಯುನ್ನತ ಗೌರವ ಇವರದಾಗಿದೆ.

ನನ್ನ ನೆನಪು:
1981-82ನೇ ಸಾಲಿನಲ್ಲಿ ಮ.ಬ.ಸೋಮಣ್ಣ ಮಾಸ್ತರ್ ಸತ್ಯನಾರಾಯಣ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಏಳನೇ ತರಗತಿ ಓದುವಾಗ ಕನ್ನಡ ಶಿಕ್ಷಕರಾಗಿದ್ದರು. ವ್ಯಾಕರಣವನ್ನು ಸರಳವಾಗಿ ಬೋಧಿಸಿ ಮನದಲ್ಲಿ ಉಳಿಯುವಂತೆ ಕಲಿಸುವ ಕೌಶಲ ಅವರಿಗೆ ಸರಸ್ವತಿಯೇ ಸ್ವತಃ ನೀಡಿದ ವರವಾಗಿತ್ತು. ಅವರಿಂದ ಕಲಿತ ವಿಭಕ್ತಿ ಪ್ರತ್ಯಯಗಳನ್ನ ಇಂದಿಗೂ ನಾನು ಮರೆತಿಲ್ಲ. ಬಹುಶಃ ಅವರ ಶಿಷ್ಯಂದಿರು ಕೂಡಾ ಮರೆತಿರಲಿಕ್ಕಿಲ್ಲ.
ಕಮಲಾಪುರದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನುವಹಿಸಿದ್ದ ಸಂದರ್ಭದಲ್ಲಿ ಅವರೊಂದಿಗಿನ ಸಂದರ್ಶನದ ಪಾಠ:
ಪ್ರಸ್ತುತ ದಿನಮಾನಗಳಲ್ಲಿ ರಂಗಭೂಮಿಯ ಸ್ಥಿತಿಗತಿ ಹೇಗಿದೆ?
ಈ ಮೊದಲು ಸಿನಿಮಾದಿಂದ ಅಷ್ಟಿಷ್ಟು ರಂಗಭೂಮಿ ನಲುಗಿತ್ತು. ಇದೀಗ ಆಧುನಿಕತೆಯ ಮಾಧ್ಯಮಗಳ ಆರ್ಭಟದಲ್ಲಿ ನಿಜಕ್ಕೂ ರಂಗಭೂಮಿ ಸೊರಗುತ್ತ ಸಾಗಿದೆ. ರಂಗಭೂಮಿ ನಿರ್ವಹಣೆಯ ವೆಚ್ಚವೂ ಅಧಿಕವಾಗಿದ್ದು ವಾಸ್ತವದಲ್ಲಿ ರಂಗಭೂಮಿ ಬಿಳಿಯಾನೆಯಾದಂತಾಗಿದೆ. ಕಲಾ ಪ್ರೇಕ್ಷಕರ ಕೊರತೆಯೂ ರಂಗಭೂಮಿಯನ್ನು ಕಾಡುತ್ತಿದೆ.
ರಂಗಭೂಮಿಯ ಉಳಿವು ಮತ್ತು ಪೋಷಣೆಗಾಗಿ ನಿಮ್ಮ ಆಲೋಚನೆಗಳೇನು?
ರಂಗಭೂಮಿಯನ್ನು ಸರ್ಕಾರ ಮತ್ತು ಸಮುದಾಯಗಳಿಂದ ಮಾತ್ರ ಉಳಿಸಿ ಪೋಷಿಸಲು ಸಾಧ್ಯ. ವೃತ್ತಿ ರಂಗಭೂಮಿ ಕಲಾವಿದರ, ವೃತ್ತಿ ರಂಗಭೂಮಿ ಕಂಪನಿಗಳ ಉದ್ಧಾರ ಮತ್ತು ಆರ್ಥಿಕವಾಗಿ ಸದೃಢತೆ ಸಾಧಿಸಲು ಸರ್ಕಾರ ನಿಶ್ಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ನಕಲಿ ಕಲಾವಿದರನ್ನು ದೂರವಿಡಬೇಕು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣತನಕ ರಂಗಭೂಮಿಯ ನಾನಾ ಮಜಲುಗಳನ್ನು ಪರಿಚಯಿಸುವ ಕೆಲಸವಾಗಬೇಕು. ಪಠ್ಯಪೂರಕವಾಗದೆ ಪಠ್ಯವಾಗಿ ಪರಿಚಯಿಸುವಂತಾಗಬೇಕು. ಜನರೂ ಸಹ ಹಣ ತೆತ್ತು ನಾಟಕಗಳನ್ನು ನೋಡುವಂತಾಗಬೇಕು. ಒಟ್ಟಿನಲ್ಲಿ ಹೇಳುವುದಾದರೆ ದಕ್ಷಿಣ ಕನ್ನಡದಲ್ಲಿ ಯಕ್ಷಗಾನಕ್ಕೆ ನೀಡಿದ ದೈವ ಪ್ರಧಾನ್ಯತೆಯನ್ನು ರಾಜ್ಯದಲ್ಲಿ ರಂಗಭೂಮಿಗೂ ನೀಡಿದಲ್ಲಿ ಮಾತ್ರ ಸದೃಢವಾಗಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ.
ರಂಗಭೂಮಿ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಸಲಹೆಗಳೇನು?
ರಂಗಭೂಮಿ ಆಕರ್ಷಣೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಿದೆ. ಈಚೀನ ದಿನಮಾನಗಳಲ್ಲಿ ರಂಗಭೂಮಿಯಲ್ಲೂ ಆಧುನಿಕತೆಯ ಸ್ಪರ್ಶ ಮೂಡುತ್ತಿದೆ. ಬೆಳಕು, ರಂಗಪರಿಕರ, ಅಭಿನಯ, ವೇದಿಕೆ, ಅಭಿವ್ಯಕ್ತತೆ, ಸಂಗೀತ, ಸಾಹಿತ್ಯದಲ್ಲೂ ನವನಾವೀನ್ಯತೆಯನ್ನು ಅಳವಡಿಸಿಕೊಳ್ಳುತ್ತಿದೆ. ಆದರೆ, ರಂಗಭೂಮಿ ಶಿಸ್ತು ಕಳೆದುಕೊಳ್ಳಬಾರದು. ಕಲಾ ಪ್ರೇಕ್ಷಕರನ್ನು ಸೆಳೆಯಲು ರಂಗಭೂಮಿಯ ನೈತಿಕ ಚೌಕಟ್ಟನ್ನು ಮೀರುವ ಸಂಗತಿಗಳು ಜರುಗುತ್ತಿದ್ದು ಖೇದಕರವಾಗಿದೆ. ರಂಗಭೂಮಿಯ ಕೌಶಲ್ಯಗಳೊಂದಿಗೆ ಶಾಸ್ತಿçÃಯವಾಗಿ ರಂಗಭೂಮಿ ಜೀವಂತಿಕೆ ಕಾಪಾಡಿಕೊಳ್ಳುವಲ್ಲಿ ರಂಗಕರ್ಮಿಗಳು ಶ್ರಮಿಸಬೇಕಾಗಿದೆ.
ರಂಗಭೂಮಿಯನ್ನು ಸರ್ಕಾರ ಹೇಗೆ ಬಳಸಿಕೊಳ್ಳಬಹುದಾಗಿದೆ?
ರಂಗಭೂಮಿಯ ಕಲಾವಿದರನ್ನು ಸರ್ಕಾರ ತನ್ನ ಯೋಜನೆಗಳನ್ನು ಜನತೆಗೆ ತಲುಪಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ದೂರದರ್ಶನದ ಜಾಹಿರಾತಿಗೆ ಇರುವ ಮೌಲ್ಯ ರಂಗಭೂಮಿ ಕಲಾವಿದರಿಗೆ ಇಲ್ಲದಿರುವುದು ಶೋಚನೀಯವಾಗಿದೆ. ಜನ ಜಾಗೃತಿಗೊಳಿಸಲು ಬೀದಿ ನಾಟಕ, ಜಾಗೃತಿ ನಾಟಕಗಳ ಕಲಾವಿದರನ್ನು ಸರ್ಕಾರ ತನ್ನ ಆಡಳಿತದ ನಾನಾ ಸ್ತರಗಳಲ್ಲೂ ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳಬೇಕು. ಅರ್ಹ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಕಲಾವಿದರ ಜೀವನ ನಿರ್ವಹಣೆಗೆ ಸೂಕ್ತ ಸೌಲಭ್ಯಗಳನ್ನು ನೀಡುವಂತಾಗಬೇಕು ಎಂಬುದನ್ನು ಅವರು ಮನದಾಳದ ಮಾತು ಆಡಿದ್ದರು.
ಇದೀಗ ಮ.ಬ.ಸೋಮಣ್ಣ ಮಾಸ್ತರ್ ಸಾವಿರಾರು ಶಿಷ್ಯಂದಿರ ಹೃದಯದಲ್ಲಿ ಉಳಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಕನ್ನಡ ಪಾಠ ನೆನಪಾದಾಗಲೆಲ್ಲ, ಕನ್ನಡ ವ್ಯಾಕರಣ ನೆನಪಾದಾಗಲೆಲ್ಲ ಮ.ಬ.ಸೋಮಣ್ಣ ಮಾಸ್ತರ್ ನೆನಪಾಗುತ್ತಾರೆ.
ಎಷ್ಟೋ ಶಿಷ್ಯಂದಿರಿಗೆ ಅವರ ಪಾಠವೇ ಬಾಳಿಗೆ ಸ್ಫೂರ್ತಿಯಾಗಿದೆ ಎಂದರೆ ತಪ್ಪಲ್ಲ..
ಮ.ಬ.ಸೋಮಣ್ಣ ಮಾಸ್ತರ್ ಕನ್ನಡ ಪಾಠ ಮುಗಿಸಿದರಷ್ಟೆ.
ಇನ್ನು…..ಅವರ ಬೋಧನೆಯ ನೆನಪಷ್ಟೇ.

-ಬಂಗಿ ದೊಡ್ಡ ಮಂಜುನಾಥ, ಸಾಹಿತಿ, ಪತ್ರಕರ್ತರು,
ಕಂಪ್ಲಿ
–
