ಮಗ್ಗ ಮುರಿಯುವ ಸದ್ದು….
ಚರ್ಮವೇ ಪದರು ಪದರಾಗಿ ಸಿಪ್ಪೆಸುಲಿವಂತೆ
ಒಂದು ಹತ್ತಿಯಕಾಯಿ ನೂಲುಂಡೆಯಾಗುವುದು
ಎಷ್ಟೆಲ್ಲಾ ಕೈಗಳ ಉಸಿರು ಎಳೆ ಎಳೆಯಾಗಿ ತಾಗಿದರೇನೇ
ದಾರದೆಳೆಯಾಗಿ ಹೊರಳಿ ಬಟ್ಟೆಯ ಕಟ್ಟಾಗುವುದು.
ಬಣ್ಣವಿಲ್ಲದ ಬದುಕಿನಲಿ ನೂಲಿಗೆ ಬಣ್ಣವೆದ್ದಿದರೂ
ನೀರಿಂಗಿದ ನೆಲದ ಹಾಗೆ ಊದಿಕೊಂಡ ಕಣ್ಣಲ್ಲಿ
ಕಣ್ಣೀರು ಒತ್ತರಿಸಿಬಂದಂತೆಲ್ಲಾ ಒತ್ತಿಕೊಳ್ಳುತ್ತಾರೋ
ಸೂಜಿಯಿಂದ ದಾರವು ಹೊರಟಂತೆ
ಚರ್ಮದಿಂದ ರಕ್ತವು ಆವಿಯಾದರೇನೇ
ಒಂದು ವಸ್ತ್ರವಾಗಿ ನಾಗರೀಕತೆಯ ಮಾನ ಉಳಿಸುತ್ತದೆ.
ಮೂಲೆಗೆ ಬಿದ್ದ ಮಗ್ಗ ಪ್ರತಿಸಲವೂ
ಪಕ್ಕೆಗಳಲಿ ಚಕ್ರ ತಿರುಗುವಂತೆ
ಕರುಳುಗಳು ಒಂದಕ್ಕೊಂದು ಹೊರಳಾಡುತ್ತವೆ
ಉರಿಸೋ ಕೆಂಡ, ಬೇಯಿಸುವ ಮಡಕೆ ಸಿಗದೆ
ಒಡಲು ಹಸಿವತುಂಬಿಕೊಂಡು ಹೊಯ್ದಾಡುತ್ತದೆ.
ಮಾಡಿದ ಪ್ರತಿ ಸಾಲ
ನೇಣ ಕುಣಿಕೆಗೆ ಒಂದೊಂದು ನೂಲಿನಂತೆ ಬಿಗಿದು
ಬಡತನವ ಹೊರತಂದು ಹರಾಜಿಗಿಡುತ್ತವೆ
ಮತ್ತೊಂದು ಬದಿಯ ಪುಟ್ಟ ಜೀವ
ಹರಿದ ಅಂಗಿಯ ಹಾಗೆ ಕಂಬದಲಿ ನೇತಾಡುತ್ತದೆ.
ಬೆವರಿನ ರೆಕ್ಕೆಯ ಕಿತ್ತುಕೊಂಡು
ಬರಗಾಲವ ಶಪಿಸುವುದು
ನೂಲು ಚಕ್ರಗಳ ನಡುವೆ
ಅವರ ಬದುಕೇ ಬಣ್ಣದ ಚಿತ್ರವೆಂದಂತೆ
ಉರಿಯ ಕೈಗಳಲಿಡಿದು
ಹರಿವ ಹೃದಯದ ರಂದ್ರಗಳ
ಬಡತನದ ಸೂಜಿಯಲಿ ಹೊಲೆಯುತ್ತಾರೆ
ದಿನ ಸರಿದರೂ, ತಲೆಮಾರು ಕಳೆದರೂ
ಸರ್ಕಾರಿ ಹರಾಜಿನಲಿ
ವಂಚನೆಗೊಳಗಾಗುತ್ತಾರೆ.
ಕಾಲಕೆಳಗೆ ನಲುಗುವ ಮಗ್ಗದ ಜೀವಗಳ ಹಾಗೇ
ಬದುಕ ಕೊನೆಯಾದರೂ ಮಗ್ಗದ ದನಿಗೆ ಧಣಿವಿಲ್ಲ.

ಶ್ರೀ ವೈಷ್ಣವಿ

ಡಾ.ಶಿವಕುಮಾರ್ ಕಂಪ್ಲಿ, ದಾವಣಗೆರೆ
