ವಿಶ್ರಾಂತ ಡಿಡಿಪಿಐ ಮಹಿಮ ಅವರ ‘ಪ್ರೀತಿ ಇಲ್ಲದ ಮೇಲೆ….’ ಕೃತಿ ಲೋಕಾರ್ಪಣೆ: ಜೀವನಾನುಭವಗಳ ಅರ್ಥಪೂರ್ಣ ಅಭಿವ್ಯಕ್ತಿ ‘ಪ್ರೀತಿ ಇಲ್ಲದ ಮೇಲೆ…’ -ಡಾ. ಸಿದ್ಧರಾಮ ಹೊನ್ಕಲ್ 

ಬಳ್ಳಾರಿ,ಆ.31:  ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಅವರ ‘ಪ್ರೀತಿ ಇಲ್ಲದ ಮೇಲೆ…’ ಕೃತಿ ಕೇವಲ ನೆನಪುಗಳ ಸಂಕಲನವಲ್ಲ; ಅದು ಬದುಕಿನ ಹಲವು ಮಜಲುಗಳನ್ನು ಆಪ್ತವಾಗಿ ಪರಿಚಯಿಸುವ ಜೀವನಾನುಭವದ ಕಥನವಾಗಿದೆ
ಎಂದು ಹೆಸರಾಂತ ಗಜಲ್ ಕಾರರಾದ ಡಾ. ಸಿದ್ಧರಾಮ ಹೊನ್ಕಲ್ ಅವರು ತಿಳಿಸಿದರು.
ನಗರದ ಹವಾಂಭಾವಿ ಪ್ರದೇಶದ
ಓಶೋ ಜಾಗೃತಿ ಕೇಂದ್ರದಲ್ಲಿ ಭಾನುವಾರ ಹಂದ್ಯಾಳು ಅವಧೂತ ಪ್ರಕಾಶನ ಹಮ್ಮಿಕೊಂಡಿದ್ದ
ವಿಶ್ರಾಂತ ಡಿಡಿಪಿಐ ಹಾಗೂ ಲೇಖಕ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ (ಮಹಿಮ) ಅವರ  ‘ಪ್ರೀತಿ ಇಲ್ಲದ ಮೇಲೆ…’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮನುಷ್ಯನ ಬದುಕಿನಲ್ಲಿ ಕೆಲ ನೆನಪುಗಳು ಎಂದಿಗೂ ಮಾಸುವುದಿಲ್ಲ. ಕಾಲ ಎಷ್ಟೇ ದೂರ ಸಾಗಿದರೂ
ಬಾಲ್ಯದ ದಿನಗಳು ಅಪ್ಯಾಯಮಾನ ಎಂದು ಹೇಳಿದರು. ಆ ದಿನಗಳಲ್ಲಿ ಬೆಸೆದುಕೊಂಡ ಸಂಬಂಧಗಳು,
ಬದುಕಿನಲ್ಲಿ ಎದುರಾದ ವ್ಯಕ್ತಿಗಳು ಹಾಗೂ ಅವರು
ನೀಡಿದ ಪ್ರೀತಿ ಮನಸ್ಸಿನ ಯಾವುದೋ ಮೂಲೆಯಲ್ಲಿ
ಹಾಗೆಯೇ ಉಳಿದುಬಿಡುತ್ತವೆ. ಇಂತಹ ನೆನಪುಗಳನ್ನು ಮತ್ತೆ ಕೆದಕಿ, ಅವುಗಳೊಂದಿಗೆ ಬೆಸೆದುಕೊಂಡಿರುವ
ಜೀವನಾನುಭವಗಳನ್ನು ಅಕ್ಷರಗಳ ಮೂಲಕ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಆದರೆ ಲೇಖಕ
ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಅವರು ತಮ್ಮ ಕೃತಿಯಲ್ಲಿ ಇದನ್ನು ಸಮರ್ಥವಾಗಿ ಹಿಡಿದಿಟ್ಟಿದ್ದಾರೆ ಎಂದು
ಶ್ಲಾಘಿಸಿದರು.


ತಮ್ಮ ಸ್ವರಚಿತ ಕವಿತೆ ವಾಚಿಸುವ ಮೂಲಕ ವಿಶಿಷ್ಠವಾಗಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವೀವಿ ಸಂಘದ ಕಾರ್ಯದರ್ಶಿ,  ಸಾಹಿತಿ ಡಾ. ಅರವಿಂದ ಪಾಟೀಲ್, ‘ಪ್ರೀತಿ ಇಲ್ಲದ ಮೇಲೆ’ ಕೃತಿಯಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದನೆ ಗಮನ ಸೆಳೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೀತಿ, ವಿಶ್ವಾಸ, ಕಾಳಜಿ, ಸಹಾನುಭೂತಿ, ಪರಸ್ಪರ
ಗೌರವ, ಸಂಬಂಧಗಳ ಬೆಲೆ ಮುಂತಾದ ಮೌಲ್ಯಗಳನ್ನು ಮಹಿಮ ಅವರು ತಮ್ಮ ಅನುಭವಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಹಣ, ಸ್ಥಾನಮಾನ, ಪ್ರತಿಷ್ಠೆ ಹಾಗೂ ಆಧುನಿಕ
ಜೀವನಶೈಲಿಯ ನಡುವೆ ಮನುಷ್ಯನೊಳಗಿನ ಮಾನವೀಯತೆ ನಿಧಾನವಾಗಿ
ಮಸುಕಾಗುತ್ತಿರುವ ಈ  ಸಂದರ್ಭದಲ್ಲೇ ಮಾನವೀಯ ಮೌಲ್ಯಗಳ ಮಹತ್ವವನ್ನು ಕೃತಿ ತೆರೆದಿಟ್ಟಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಓಶೋ ಜಾಗೃತಿ ಕೇಂದ್ರದ ಗುರುಸ್ವಾಮಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ
ಡಿಡಿಪಿಐ ಡಾ. ಜೆ.ಎಂ. ತಿಪ್ಪೇಸ್ವಾಮಿ, ಲೇಖಕ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ (ಮಹಿಮ),  ನ್ಯಾಯವಾದಿ ಆ‌ರ್.ಜಿ. ಎರಿಸ್ವಾಮಿ, ಸಿರುಗುಪ್ಪ ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ. ವೀರೇಶ್ ಮಾತನಾಡಿದರು.
ಓಶೋ ಜಾಗೃತಿ ಕೇಂದ್ರದ ಮುಖ್ಯಸ್ಥ ಪಂಪಾಪತಿ, ಅವಧೂತ ಪ್ರಕಾಶನದ ಮುಖ್ಯಸ್ಥ ಎಚ್‌. ಎಂ. ಸಿದ್ಧಾರ್ಥ ಉಪಸ್ಥಿತರಿದ್ದರು.


ಸನ್ಮಾನ: ವಿವಿಧ ರಂಗಗಳಲ್ಲಿ ಅನುಪಮ‌ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಗಂಗಾಧರ ಪತ್ತಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದ್ಯಾಳು, ರಂಗ ಕರ್ಮಿಗಳಾದ ಕೆ. ಜಗದೀಶ್,    ಕೂಡ್ಲಿಗಿಯ ಶಿವ ನಾಯಕ ದೊರೆ, ಕರ್ನಾಟಕ ನಾಟಕ‌ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ  ಪುರುಷೋತ್ತಮ ಹಂದ್ಯಾಳು, ವರ್ಣಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ಮಹದ್ ರಫಿ, ರಂಗಕಲಾವಿದ  ಎಎಂಪಿ ವೀರೇಶ್ ಸ್ವಾಮಿ ಅವರನ್ನು ಅವಧೂತ ಪ್ರಕಾಶನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಕೃತಿ ಪ್ರಕಾಶನದ ಪ್ರಕಾಶಕ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಸ್ವಾಗತಿಸಿದರು. ವಿಶ್ರಾಂತ ಮುಖ್ಯ ಗುರು ಮಹೇಶ್ವರಯ್ಯ ಪ್ರಾರ್ಥಿಸಿದರು. ಲೇಖಕ ಎಎಂಪಿ ವೀರೇಶಯ್ಯಸ್ವಾಮಿ ಕಾರ್ಯಕ್ರಮ
ನಿರೂಪಿಸಿದರು. ಅಧ್ಯಾಪಕಿ ರತ್ನಾ ಮಹಿಮ ಅವರು ವಂದಿಸಿದರು.
—–

Leave a Reply

Your email address will not be published. Required fields are marked *