ಪ್ರಜ್ಞಾವಂತ ಪ್ರಜೆಗಳ ನಿರ್ಮಾಣ ಅಗತ್ಯ : ಸಿ.ಎಂ. ಫೈಝ್ ಮಹಮ್ಮದ್ ಅಭಿಮತ

ಬೆಂಗಳೂರು : ಮಹಾ ನಗರದ ಹೆಚ್.ಕೆ.ಬಿ.ಕೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.
ಟಾಟಾ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯ ತಾಂತ್ರಿ‌ಕ ಅಧಿಕಾರಿ ರಬೀಂದ್ರ ಸಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ.‌ ಅವುಗಳನ್ನು ಬಳಸಿಕೊಳ್ಳಲು ಜ್ಞಾನ, ಕೌಶಲಗಳು ಅವಶ್ಯ. ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸರ್ವತೋಮುಖ ಬೆಳವಣಿಗೆ ಕಾಣಬೇಕು. ಡಿಜಿಟಲ್ ಜ್ಞಾನ ಬೆಳೆಸಿಕೊಂಡು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿನೂತನ ಆವಿಷ್ಕಾರಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ‌ ನಿರ್ದೇಶಕ ಸಿ.ಎಂ. ಫೈಝ್ ಮಹಮ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನಿಜವಾದ ಮನುಷ್ಯರಾಗಬೇಕು. ಮನುಷ್ಯರನ್ನಾಗಿಸುವುದೇ ಶಿಕ್ಷಣದ ಅಂತಿಮ ಗುರಿ. ನಮ್ಮ‌ ಸಂಸ್ಥೆ ಚಾರಿತ್ರ್ಯವಂತ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತ ಬಂದಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಬಗೆಯ ಅವಕಾಶಗಳನ್ನು ಒದಗಿಸಲಾಗುವುದು. ದೇಶದ ಅಭಿವೃದ್ಧಿ ವಿದ್ಯಾರ್ಥಿಗಳನ್ನು ಅವಲಂಬಿಸಿದೆ. ದೇಶವನ್ನಾಳುವ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸಿ ಪ್ರಜ್ಞಾವಂತ ಪ್ರಜೆಗಳನ್ನು ನಿರ್ಮಾಣ ಮಾಡಲು ಹೆಚ್.ಕೆ.ಬಿ.ಕೆ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.‌


ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಶಿಸ್ತು ಆತ್ಮವಿಶ್ವಾಸ ಸಮಯ ನಿರ್ವಹಣೆ ಜ್ಞಾನ ಸಂಪಾದನೆಯೊಂದಿಗೆ ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಮೈಕ್ರೋಸಾಫ್ಟ್ ಕಂಪನಿಯ ಡಿಸೈನ್ ಇಂಜಿನಿಯರಿಂಗ್ ನ ಪ್ರಿನ್ಸಿಪಾಲ್ ಶೇಕ್ ಅಲೀಮ್ ಉರ್ ರಹಮಾನ್ ಮಾತನಾಡಿದರು.


ಪ್ರೊ. ನೂರ್ ಆಯೇಷಾ, ಪ್ರೊ.‌ ಆಫ್ರಿನ್ ಕುಬ್ರಾ ಕಾರ್ಯಕ್ರಮ ನಿರ್ವಹಿಸಿದರು. ಡಾ. ಆರ್ಯ ಲಕ್ಷ್ಮೀ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

ಡೀನರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *