ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳ್ ಗೆ  ಕಾನಿಪದಿಂದ ಗೌರವ ಸನ್ಮಾನ

ಬಳ್ಳಾರಿ:  ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ನಗರದ ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ ಅವರು 1991 ರಿಂದ ರಂಗಭೂಮಿಯಲ್ಲಿ ಸಕ್ರೀಯನಾಗಿ ನಟನೆ ಆರಂಭಿಸಿದೆ.  “ಆಶಾಲತ” ಸಾಮಾಜಿಕ ನಾಟಕದಲ್ಲಿ ಫೋಟೋಗ್ರಾಫರ್ ಪಾತ್ರದಿಂದಲೇ ರಂಗ ಪ್ರವೇಶ ಮಾಡಿದೆ.‌ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ ಎಂದರು.                                    ರಂಗ ಸೇವೆಗಾಗಿ ಶ್ರೀ ಮಹದೇವತಾತ ಕಲಾ ಸಂಘ ಸ್ಥಾಪಿಸಿ ಈ ಮೂಲಕ  ಅನೇಕ‌ ಕಲಾವಿದರನ್ನು ಪ್ರೋತ್ಸಾಹಿಸಿದ್ದೇನೆ.  ರಂಗ ಸೇವೆ ಜತೆ  ಪತ್ರಿಕಾ ಛಾಯಾಗ್ರಾಹಕ ವೃತ್ತಿಯನ್ನು ಅಳವಡಿಸಿಕೊಂಡಿರುವುದು ಸಂತಸ ತಂದಿದೆ ಎಂದು ವಿವರಿಸಿದರು.
ನನ್ನ ರಂಗಭೂಮಿ ಕ್ಷೇತ್ರದ ಬೆಳವಣಿಗೆಗೆ ಮಾಧ್ಯಮ‌ಮಿತ್ರರ ಸಹಕಾರ ಮರೆಯಲಾರೆ.  ಈ ವರ್ಷ ನನಗೆ ದೊರೆತಿರುವ  ಈ ಪ್ರಶಸ್ತಿಯನ್ನು ರಂಗಭೂಮಿಯ ಜಿಲ್ಲಾ ಕಲಾವಿದರಿಗೆ ಅರ್ಪಿಸುವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ. ಪುರುಷೋತ್ತಮ ಅವರು,  ಎಮ್ಮಿಗನೂರಿನ‌ ಶ್ರೀ ಜಡೇತಾತಾ ಹಾಸ್ಟಲ್ ಮೂಲಕ‌ ಶಿಸ್ತಿನ ಬದುಕು ರೂಪಿಸಿಕೊಂಡವರು. ಹವ್ಯಾಸಿ ಛಾಯಗ್ರಾಹಕರಾದರು. ಚಿಕ್ಕಂದಿನಿಂದ ರಂಗ ಭೂಮಿಯ ಗೀಳು ಹೊಂದಿದ್ದ ಅವರು ತನ್ನೊಳಗಿನ  ಕಲಾ ಪ್ರತಿಭೆಯನ್ನು ರಂಗಾಸಕ್ತರ ಆಶಯದಂತೆ ಈವರೆಗೆ ನೂರಾರು ನಾಟಕಗಳ ಪ್ರದರ್ಶನದಲ್ಲಿ ಸಾಮಾಜಿಕ, ಪೌರಾಣಿಕ ಪಾತ್ರಗಳಿಗೆ ಬಣ್ಣ ಬಳಿದುಕೊಂಡು ಜೀವ ತುಂಬಿದ್ದಾರೆ ಎಂದು ತಿಳಿಸಿದರು.  ಇವರ ಶಕುನಿ ಪಾತ್ರ ಕನ್ನಡ ರಂಗ ಭೂಮಿ ಮರೆಯಲಾರದಂತಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಹುಲುಗಣ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಸಂಘದ ಎಲ್ಲಾ ಸದಸ್ಯರು ಪುರುಷೋತ್ತಮ ಅವರನ್ನು ಗೌರವಿಸಿದರು.

Leave a Reply

Your email address will not be published. Required fields are marked *