ಹರಿಹರ: ಕೇವಲ ಬಾಹ್ಯ ರೂಪ ಅಥವಾ ಬಟ್ಟೆ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಬದಲಿಗೆ ಮನದೊಳಗಿನ ಚಾರಿತ್ರ್ಯ, ಆತ್ಮವಿಶ್ವಾಸ ಮತ್ತು ಆಲೋಚನೆಗಳು ನಿಜವಾದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಈ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕ ಪಾತ್ರವೂ ಅಪಾರವಾಗಿದೆ ಎಂದು ಚಳ್ಳಕೆರೆಯ ಶ್ರೀ ಶಾರದಾಶ್ರಮ ಅಧ್ಯಕ್ಷರಾದ ಪೂಜ್ಯ ತ್ಯಾಗಮಯಿ ಮಾತಾಜಿ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜರುಗಿದ ‘ಸ್ವಾಮಿ ವಿವೇಕಾನಂದರು ಮತ್ತು ವ್ಯಕ್ತಿತ್ವ ನಿರ್ಮಾಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸಿಗೆ ಆವರಿಸಿರುವ ಅಜ್ಞಾನದ ಪರದೆಯನ್ನು ತೆರವುಗೊಳಿಸಬೇಕು. ಆ ಮೂಲಕ ಒಳ್ಳೆಯ ಆಲೋಚನೆಗಳನ್ನು ಮತ್ತು ಕೆಲಸಗಳನ್ನು ಮಾಡಿದರೆ, ಕಾಲಾನಂತರದಲ್ಲಿ ಅವುಗಳು ಉತ್ತಮ ಅಭ್ಯಾಸಗಳಾಗಿ ಬದಲಾಗಿ, ಗಟ್ಟಿಯಾದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದರು ಯುವಜನತೆಗೆ ಮತ್ತು ಇಡೀ ಮಾನವಕುಲಕ್ಕೆ ನೀಡಿದ ಅತ್ಯಂತ ದೊಡ್ಡ ಕೊಡುಗೆ ಎಂದರೆ ವ್ಯಕ್ತಿತ್ವ ನಿರ್ಮಾಣದ (Personality Development) ತತ್ವಗಳು ಎನ್ನಬಹುದು. ಧೈರ್ಯದಿಂದ ಸವಾಲುಗಳನ್ನು ಎದುರಿಸಿದಾಗ ಮಾತ್ರ ವ್ಯಕ್ತಿತ್ವ ಗಟ್ಟಿಯಾಗುತ್ತದೆ. ಒಂದು ಉತ್ತಮ ಆಲೋಚನೆಯನ್ನು ತೆಗೆದುಕೊಳ್ಳಿ. ಅದನ್ನೇ ನಿಮ್ಮ ಜೀವನವಾಗಿಸಿಕೊಳ್ಳಿ. ಅದನ್ನೇ ಯೋಚಿಸಿ. ಅದನ್ನೇ ಕನಸು ಕಾಣಿ. ಆ ಆಲೋಚನೆಯಲ್ಲೇ ಬದುಕಿ. ಹಾಗೂ ನನ್ನಲ್ಲಿ ಅಪಾರ ಶಕ್ತಿ ಇದೆ. ನಾನು ಏನು ಬೇಕಾದರು ಸಾಧಿಸಬಲ್ಲೇ ಎಂಬೆಲ್ಲಾ ಘೋಷಗಳು ಸ್ವಾಮಿ ವಿವೇಕಾನಂದರು ಯುಜನತೆಗೆ ನೀಡಿದ ಜನಪ್ರಿಯ ಕರೆಯಾಗಿವೆ ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಕುಂತಲಾ.ಎನ್ ಅವರು ಮಾತನಾಡಿ, ಸತ್ಯ, ಪ್ರಾಮಾಣಿಕತೆ ಮತ್ತು ಪಾವಿತ್ರತೆಗಳು ಚಾರಿತ್ರ್ಯದ ಅಡಿಪಾಯಗಳಾಗಿವೆ. ನಾವು ಆಡುವ ಮಾತು ಮತ್ತು ಮಾಡುವ ಕೆಲಸಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಮನಸ್ಸಿನಲ್ಲಿ ಏಕಾಗ್ರತೆ ಇದ್ದರೆ ಜಗತ್ತಿನ ಯಾವುದೇ ಕೆಲಸವನ್ನು ಸುಲಭವಾಗಿ ಸಾಧಿಸಬಹುದು ಎಂದು ಹೇಳಿದರು.
ಧಾರವಾಡದ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ಬುದ್ಧಿಯೋಗಾನಂದಜೀ ಮಾಹಾರಾಜ ಅವರು, ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಆತ್ಮದೀಪಾನಂದಜೀ ಮಹಾರಾಜ್ ಅವರು, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಟಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಯಶೋಧಾ.ಆರ್ ಅವರುಗಳು ಉಪಸ್ಥಿತರಿದ್ದರು.
ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿ ಕು.ಅನುಷಾ.ಜಿ.ಎಂ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗೌರಮ್ಮ.ಎಂ.ಎಸ್ ಸ್ವಾಗತಿಸಿದರು. ಲೆಕ್ಕ ಪರಿಶೋಧರು ಮತ್ತು ತೆರಿಗೆ ಸಲಹಾಗಾರರಾದ ಶ್ರೀಮತಿ ಕೆ.ಎಂ.ಸಾವಿತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ.ಜಿ.ಪಿ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಗಂಗರಾಜು.ಎಸ್ ವಂದಿಸಿದರು.
