ಹರಿಹರ: ವಿಕಸಿತ ಭಾರತದ ಗುರಿ ಸಾಧಿಸಲು ದೇಶದ ಯುವಜನರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಇದಕ್ಕಾಗಿ ಯುವಕರು ಎಲ್ಲಾ ರೀತಿಯ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವುದು ಒಳಿತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಶಕುಂತಲಾ.ಎನ್ ಅವರು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ದ ಅಂಗವಾಗಿ ಆಯೋಜಿಸಲಾಗಿದ್ದ, ಮಾದಕ ವಸ್ತುಗಳ ಸೇವನೆಯ ವಿರುದ್ಧದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಗೆಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಆರೋಗ್ಯಕರ ಹಾಗೂ ಉತ್ತಮ ಜೀವನಶೈಲಿಯತ್ತ ಪ್ರೇರೇಪಿಸುತ್ತವೆ ಎಂದು ಹೇಳಿದರು.
ಕಾಲೇಜಿನ ನಶಾ ಮುಕ್ತ ಸಮಿತಿ ಸಂಯೋಜಕರಾದ ಡಾ. ಶಮಾ ತುಮ್ಮಿನಕಟ್ಟಿ ಮಾತನಾಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಅಭಿಯಾನವು ಕೇವಲ ಯುವಜನರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಕುಟುಂಬ, ಸಮಾಜ ಹಾಗೂ ಇಡೀ ದೇಶದ ಭವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ. ಅವರು ಮಾತನಾಡಿ, ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲದೆ ಕುಟುಂಬ ಹಾಗೂ ಸಮಾಜದ ಶಾಂತಿಯನ್ನೂ ಹಾಳುಮಾಡುತ್ತದೆ. ವಿದ್ಯಾರ್ಥಿಗಳು ಇಂತಹ ವ್ಯಸನದ ಬಲೆಗೆ ಬೀಳದೆ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ಯೋಗೇಶ್ ಕೆ.ಎನ್., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ ಅವರು ಮಾತನಾಡಿದರು.
ಬಿ.ಕಾಂ ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ವಿದ್ಯಾರ್ಥಿ ಆಕಾಶ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ ನಿರ್ವಹಿಸಿದರು. ವಿದ್ಯಾರ್ಥಿ ಸಿದ್ದಾರ್ಥ್ ಎಂ. ವಂದಿಸಿದರು.
