ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು -ನೂತನ ಜಿಲ್ಲಾಧಿಕಾರಿ ಎಸ್.ರಮ್ಯ

ಜಿಲ್ಲಾಧಿಕಾರಿ ಎಸ್.ರಮ್ಯ

ಚಿತ್ರದುರ್ಗ, ಸೆ.8: ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುವ ವರ್ತಮಾನದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪ್ರಯತ್ನಿಸಲಾಗುವುದು. ಮಾಧ್ಯಮಗಳ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರವಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ನಿರ್ವಹಿಸುವುದಾಗಿ ನೂತನ ಜಿಲ್ಲಾಧಿಕಾರಿ ಎಸ್.ರಮ್ಯ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಪರಿಚಯಾತ್ಮಕ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರದ ಮಾನದಂಡಗಳ ಪ್ರಕಾರ ಜಿಲ್ಲೆಯ 3 ತಾಲೂಕುಗಳಲ್ಲಿ ಬರಘೋಷಣೆಯಾಗಿದೆ. ಸದ್ಯ ಉಳಿದ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಮಳೆ ಕೊರತೆ ಹಾಗೂ ಒಣ ಹವೆ ವರದಿ ಸಲ್ಲಿಸಲಾಗುವುದು. 30 ರಿಂದ 40 ವರ್ಷಗಳಿಂದ ಭೂಮಿಯನ್ನೇ ನಂಬಿ, ವ್ಯವಸಾಯದಿಂದ ಜೀವನೋಪಾಯ ಮಾಡಿಕೊಂಡಿರುವ ಅನೇಕ ಬಡ ಹಾಗೂ ಅರ್ಹ ರೈತರಿಗೆ ಅನ್ಯಾಯವಾಗದಂತೆ ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಸ್ತುತ ಫಾರಂ 57ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಹೊಸದಾಗಿ ನಿರೀಕ್ಷೆಯಲ್ಲಿದೆ. ಆದರೆ, ಈ ಹಿಂದೆ ಫಾರಂ 50 ಮತ್ತು 53ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥ ಪಡಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಗರ್ಭಿಣಿಯರು, ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿದೆ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರಮಾಣ ಹೆಚ್ಚಿದೆ ಎಂದು ಎಸ್.ರಮ್ಯಾ ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಸ್.ರಮ್ಯ

ಜಿಲ್ಲೆಯ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಮೊಳಕಾಲ್ಮೂರು ಅತ್ಯಂತ ಬಡ ಹಾಗೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ತಾಲ್ಲೂಕು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಿ ಅನೇಕ ಹೆಣ್ಣುಮಕ್ಕಳು ಶಾಲೆಗೆ ಹೋಗದಿರುವುದು ಮತ್ತು ಅಪೌಷ್ಟಿಕತೆಯ ಸಮಸ್ಯೆ ತೀವ್ರವಾಗಿದೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಅನಕ್ಷರಸ್ಥ ತಾಯಂದಿರಿಗೂ ಕೂಡ ಮಕ್ಕಳಿಗೆ ಎಂತಹ ಪೌಷ್ಟಿಕ ಆಹಾರ ನೀಡಬೇಕು ಎಂಬ ಸಾಂಪ್ರದಾಯಿಕ ಜ್ಞಾನವಿತ್ತು. ಮನೆಯಲ್ಲಿಯೇ ಬೆಳೆದ ಸೊಪ್ಪು, ತರಕಾರಿ ಹಾಗೂ ಜೋಳ, ರಾಗಿಯಂತಹ ಧಾನ್ಯಗಳನ್ನು ಬಳಸಿ ಪೌಷ್ಟಿಕ ಆಹಾರ ತಯಾರಿಸುತ್ತಿದ್ದರು. ಆದರೆ, ಇಂದಿನ ಯುವ ಪೀಳಿಗೆಯಲ್ಲಿ ಆ ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಜ್ಞಾನ ಕಡಿಮೆಯಾಗುತ್ತಿದೆ. ಶಾಲಾ-ಕಾಲೇಜು ಹಂತದಲ್ಲಿಯೇ ಹೆಣ್ಣುಮಕ್ಕಳಿಗೆ ಈ ಕುರಿತು ಸೂಕ್ತ ಶಿಕ್ಷಣ ಹಾಗೂ ಜಾಗೃತಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಆರ್ಥಿಕ ಸವಾಲುಗಳಿದ್ದರೂ ಹೆಣ್ಣುಮಕ್ಕಳ ಶಿಕ್ಷಣ, ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ಆರೋಗ್ಯ ಸುಧಾರಣೆಯ ಮೇಲೆ ಹೆಚ್ಚು ಗಮನ ಹರಿಸಿದರೆ, ಸಮಾಜದ ಒಟ್ಟಾರೆ ಜೀವನ ಮಟ್ಟ ಸ್ವಯಂ ಸುಧಾರಿಸಲಿದೆ ಎಂದು ತಿಳಿಸಿದರು.
ನೀರು ಪೋಲು ತಡೆಗೆ ಮೀಟರ್ ಅಳವಡಿಕೆ: ಜಿಲ್ಲೆಯ ನಗರ ಪ್ರದೇಶಗಳಿಗೆ ನೀರು ಒದಗಿಸುವ ಮುಖ್ಯ ಲೈನ್‍ಗಳಿಂದ ಮಧ್ಯದಲ್ಲೇ ಕೆಲ ಗ್ರಾಮಗಳ ಜನರು ಕುಡಿಯುವ ನೀರು ಸರಬರಾಜಿಗೆ ಬೇಡಿಕೆ ಇಟ್ಟಿದ್ದಾರೆ. ಕೆಲವಡೆ ಅನಧಿಕೃತವಾಗಿ ನೀರು ಟ್ಯಾಪ್ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ನೀರು ಕುಡಿಯಲು ನೀಡುವುದಿಲ್ಲ ಎನ್ನಲು ಬರುವುದಿಲ್ಲ. ಇದರ ಬದಲಾಗಿ ನಗರಸಭೆ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಕುಡಿಯುವ ನೀರಿನ ಪೈಪ್‍ಲೈನ್‍ಗಳಿಂದ ಅಕ್ರಮವಾಗಿ ನೀರು ಪಡೆದು ಪೋಲು ಮಾಡುವುದನ್ನು ತಡೆಯಲು ತಕ್ಷಣವೇ ಜಲ ಮೀಟರ್‌ ಗಳನ್ನು ಅಳವಡಿಸಲು ಚಿಂತಿಸಲಾಗುತ್ತಿದೆ ಎಂದು ಡಿಸಿ ಅವರು ಹೇಳಿದರು.
ಕೆರೆ ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ: ನಗರದ ಕೆರೆಗಳ ಕಲುಷಿತಗೊಳ್ಳುವಿಕೆ ತಡೆಯಲು ಮತ್ತು ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರದಂತೆ ತಡೆಯಲು ಸೂಕ್ತ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಳಿಗ್ಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ನಗರಸಭೆ ವ್ಯಾಪ್ತಿಯಿಂದ ಕೆರೆಗಳಿಗೆ ಯುಜಿಡಿ ಮೂಲಕ ಸಿವೇಜ್ ನೀರು ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಕೆರೆಗೆ ಹರಿಯುತ್ತಿರುವ ತ್ಯಾಜ್ಯ ನೀರಿನ ಪ್ರಮಾಣ ಮತ್ತು ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮಲ್ಲಾಪುರ ಕೆರೆಯ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಮಕ್ಕಳು ಕಲುಷಿತ ನೀರು ಹಾಗೂ ದುರ್ನಾತದಿಂದಾಗಿ ಚರ್ಮರೋಗ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಳೆ ಬಂದಾಗ ಕೆರೆ ನೀರು ಶಾಲೆ ಅಂಗಳಕ್ಕೆ ನುಗ್ಗುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೆರೆಗಳ ನೈಜ ಸ್ಥಿತಿ ಹಾಗೂ ಸಮಸ್ಯೆಯ ತೀವ್ರತೆಯನ್ನು ಅರಿತು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರ ವೀಕ್ಷಣೆ ನಡೆಸಿದಾಗ ಹಲವು ವಿಚಾರಗಳು ಗಮನಕ್ಕೆ ಬಂದಿವೆ. ನೂತನ ರಸ್ತೆಗಳನ್ನು ನಿರ್ಮಿಸಲಾಗಿದೆಯಾದರೂ, ಇಕ್ಕೆಲಗಳಲ್ಲಿ ‘ಶೋಲ್ಡರ್ ಡ್ರೈನ್ಸ್’ ನಿರ್ಮಿಸದಿರುವುದು ಕಂಡುಬಂದಿದೆ. ಮಳೆ ನೀರು ಸರಾಗವಾಗಿ ಹರಿದು ರಾಜಕಾಲುವೆ ಹಾಗೂ ಕೆರೆಗಳನ್ನು ಸೇರುವಂತೆ ಸಮರ್ಪಕ ವ್ಯವಸ್ಥೆ ಇರಬೇಕು ಎಂದರು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *