ಪ್ರೀತಿ ಎಂದರೇನೆಂಬುದ ಈ ಲೋಕ ತಿಳಿಯದೇನೋ
ಅದು ತಿಳಿದಾಗ ಬರಬಹುದು
ಎಲ್ಲ ಹೃದಯಗಳಿಗೆ ಕಣ್ಣು
ಎಲ್ಲೊ ಹುಟ್ಟಿ ಹರಿವ ನದಿಯು
ಕಡಲ ಸೇರದೇನು
ಭೋರ್ಗರೆದು ಮಿಲನಗೊಂಡು
ಮೌನ ತಾಳದೇನು
ಹಗಲು ರಾತ್ರಿ ಎದೆಯ ತೆರೆದು
ಧರೆಯು ಕಾಯದೇನು
ಮೇಲೆ ಮುಗಿಲು ಮೆತ್ತಗಾಗಿ
ಕರಗಿ ಸೇರದೇನು
ಮಕರಂದವ ಹೀರಿದ ದುಂಬಿಯ ಮೇಲೆ ಹೂಗಳು ಮಾತು ಬಿಡುವವೇನು
ಕಂಪಬೀರಿ ಅದನು ಮತ್ತೆ
ಸೆಳೆಯದಿರುವವೇನು
ಚೆಲುವು ತುಂಬಿ ತಾವರೆಯು ಅರಳಿ ನಗುವುದೇನು
ದಕ್ಕುತಿರಲು ಒಲವು ಅದಕೆ
ಕೆಸರಾದರೆ ಏನು
ನನ್ನ ಭಾವಗಳಿಗೆ ಮಿಡಿವ ಮಧುರ ವೀಣೆ ನೀನು
ಸಾಕು ಬೇರೇನು ಬೇಕು
ಹಾಡಗಲು ನಾನು
ಬದುಕಿ ಬಿಡುವ ಕೊನೆಯವರೆಗೆ
ನಿನ್ನುಸಿರಲಿ ನಾನು ನನ್ನುಸಿರಲಿ ನೀನು

-ತರುಣ್ ಎಂ ಆಂತರ್ಯ, ಚಿತ್ರದುರ್ಗ ಜಿ. ✍️
