ಬಳ್ಳಾರಿ ಚಲೋ’ ಮೊದಲ ಹಂತದ ಹೋರಾಟಕ್ಕೆ  ಗುರುವಾರ ತೆರೆ: ಜನಪರ ಹೋರಾಟ ನಿರಂತರ -ಬಿ.ವೈ. ವಿಜಯೇಂದ್ರ

ಬಿಜೆಪಿ ಪಾದಯಾತ್ರೆ ಬುಧವಾರ ಸಂಜೆ ಬಳ್ಳಾರಿ ನಗರದ ಗಡಿ ಪ್ರವೇಶಿಸುತ್ತಲೇ ಬಿ. ವೈ. ವಿಜಯೇಂದ್ರ ಅವರುನೆಲಕ್ಕೆ ಶಿರಬಾಗಿಸಿ ನಮಿಸಿದರು.

ಬಳ್ಳಾರಿ, ಸೆ. 9: ರಾಜ್ಯ ಸರ್ಕಾರ  ಜನವಿರೋಧಿ ನೀತಿ‌ ಅನುಸರಿಸುತ್ತಿದೆ  ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ‘ಬಳ್ಳಾರಿ ಚಲೋ’ ಪಾದಯಾತ್ರೆ ಬುಧವಾರ ಸಂಜೆ ನಗರವನ್ನು ತಲುಪಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು   ಮಾಧ್ಯಮಗಳ ಸಹಕಾರ, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಬೆಂಬಲದಿಂದ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.
ಗುರುವಾರ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜರುಗುವ  ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ
ಗಳಾದ
ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕರುಗಳಾದ  ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ,
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

‘10 ದಿನಗಳ ಪಾದಯಾತ್ರೆ ಗುರುವಾರ ಮುಕ್ತಾಯವಾಗಲಿದೆ. ಆದರೆ ಇದು ನಮ್ಮ ಹೋರಾಟದ ಅಂತ್ಯವಲ್ಲ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ
ವಿರುದ್ಧದ ಮೊದಲ ಹಂತದ ಹೋರಾಟ ಮಾತ್ರ ನಾಳೆಗೆ ಮುಕ್ತಾಯವಾಗಲಿದೆ. ಜನಪರ ಹೋರಾಟ ನಿರಂತರವಾಗಿ ಮುಂದುವರಿಯಲಿದೆ’ ಎಂದು ವಿಜಯೇಂದ್ರ
ಸ್ಪಷ್ಟಪಡಿಸಿದರು.


ಈ ಪಾದಯಾತ್ರೆ ನಾಡಿನ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಹೋಗುತ್ತಿರುವ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದು ದೂರಿದರು.
ಜನವಿರೋಧಿ ಸರ್ಕಾರವನ್ನು ಅತಿ ಶೀಘ್ರದಲ್ಲಿ ತೊಲಗಿಸಿ, ಬಡವರು, ರೈತರು, ಮಹಿಳೆಯರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ
ಸರ್ಕಾರವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಅವರು
ಹೇಳಿದರು.
ಈ ಪಾದಯಾತ್ರೆ ನನ್ನ ರಾಜಕೀಯ ಜೀವನದ ಮಹತ್ತರ ತಿರುವು. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಹೋರಾಟ ಇದು. ಮಹಿಳೆಯರು, ಅಲೆಮಾರಿ ಸಮುದಾಯದವರು, ರೈತರು ಹಾಗೂ ಯುವಕರೊಂದಿಗೆ ಸಂವಾದ ನಡೆಸಿದ್ದೇನೆ. ಅವರ ಬದುಕು, ನೋವು-ನಲಿವುಗಳನ್ನು ಹತ್ತಿರದಿಂದ ಅರಿಯಲು ಸಾಧ್ಯವಾಗಿದ್ದು ನನಗೆ ಆತ್ಮತೃಪ್ತಿ ತಂದಿದೆ. ನನ್ನ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದ ಹೋರಾಟ ಇದಾಗಿದೆ’ ಎಂದು ವಿಜಯೇಂದ್ರ ಭಾವುಕರಾಗಿ ಹೇಳಿದರು.
ಗುರುವಾರದ ಸಮಾವೇಶಕ್ಕೆ ಸುಮಾರು 40ರಿಂದ 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ.
ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ ಅವರು, ಕಾನೂನಿನ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ. ಆದರೆ ಕಾನೂನಿನ ನೆಪ ಹೇಳಿಕೊಂಡು ನಮ್ಮ ಹೋರಾಟಕ್ಕೆ ಅಡ್ಡಿಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ರಾತ್ರೋರಾತ್ರಿ ನಮ್ಮ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ. ಸರ್ಕಾರ ಹತಾಶಗೊಂಡಿದ್ದು, ಸರ್ಕಾರದ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿರಿಯ ನಾಯಕರ ನೇತೃತ್ವದಲ್ಲಿ ಚುನಾವಣೆ: ಮುಂಬರುವ ಚುನಾವಣೆಯನ್ನು ಬಿಜೆಪಿ ಎಲ್ಲಾ ಹಿರಿಯ ನಾಯಕರ ನಾಯಕತ್ವದಲ್ಲಿ ಎದುರಿಸಲಿದೆ ಎಂದು ವಿಜಯೇಂದ್ರ ಹೇಳಿದರು. ‘ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ನಮ್ಮೊಂದಿಗಿದೆ. ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದರು.

ನವಲಿ ಜಲಾಶಯ ನಿರ್ಮಾಣಕ್ಕೆ ಬಿಜೆಪಿ ಬದ್ಧ: ನವಲಿ ಜಲಾಶಯದ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟವಾದ ಬದ್ಧತೆ ಇದೆ. ರೈತರಿಗೆ ಅನುಕೂಲವಾಗುವ ನವಲಿ ಜಲಾಶಯ ನಿರ್ಮಾಣವಾಗಬೇಕು ಎಂಬುದು ನಮ್ಮ ನಿಲುವು. ಈಗ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿಯೂ ಈ ವಿಚಾರವನ್ನು ಬಲವಾಗಿ ಪ್ರಸ್ತಾಪಿಸಿ ಒತ್ತಾಯ ಮಾಡುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ನವಲಿ ಜಲಾಶಯದ ಬಗ್ಗೆ ನಾವು ಭರವಸೆ ನೀಡಿದ್ದೇವೆ. ಪ್ರಾಮಾಣಿಕವಾಗಿ ಈ ಯೋಜನೆಯನ್ನು ಪ್ರಸ್ತಾಪಿಸಿ, ರೈತರಿಗೆ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ’ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ
ವಿಜಯೇಂದ್ರ,  ಮಾಜಿ ಸಚಿವ ನಾಗೇಂದ್ರ ಅವರ ವಿಚಾರದಲ್ಲೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಕೆಲ ಸಚಿವರು ಬಿಜೆಪಿ ಹಿಟ್‌ಲಿಸ್ಟ್‌ನಲ್ಲಿ, ಕೆಲ ಸಚಿವರು ಕಾಂಗ್ರೆಸ್ ಹಿಟ್‌ಲಿಸ್ಟ್‌ನಲ್ಲಿ ಇದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಬಿಜೆಪಿಯ ಹೋರಾಟ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡದ್ದಲ್ಲ; ಜನರ ಪರವಾದ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
‘ಬಳ್ಳಾರಿ ಚಲೋ’ ನಾಳೆಗೆ ಮುಕ್ತಾಯವಾದರೂ, ಜನರ ಧ್ವನಿಯಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ರಾಜ್ಯದ ಜನರ ಆಶಾಭಾವನೆಗೆ ತಕ್ಕಂತೆ ಜನಪರ ಸರ್ಕಾರಕ್ಕಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ’ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
—–

Leave a Reply

Your email address will not be published. Required fields are marked *