ನಿಮ್ಮ ಕವಿತೆ ನಿಮ್ಮ ಜೊತೆಗೆ…
ನಿಮ್ಮ ಕವಿತೆ ನಿಮ್ಮ ಜೊತೆಗೆ ಇಟ್ಟುಕೊಳ್ಳಿರಿ ಬಿಗುಮಾನವ ತೊರೆದು ಒಳಗೆ ಬಿಟ್ಟುಕೊಳ್ಳಿರಿ ಒದ್ದೆ ತಲೆಯ ಒರೆಸುವಾಗ ಹೇಳಿಕೊಳ್ಳಿರಿ ನಿಮ್ಮನಗಲಿ ಹೋಗದಂತೆ ಕೇಳಿಕೊಳ್ಳಿರಿ
ಬೆಳಗು ಬಾನಿನಲ್ಲಿ ನಿಮ್ಮ ಕವಿತೆ ಹಾರಲಿ ಕತ್ತಲಲ್ಲಿ ಮತ್ತೆ ಎದೆಯ ಗೂಡು ಸೇರಲಿ ಅಲ್ಲಿ ಇಲ್ಲಿ ಹೋಗಿ ಬರಲಿ ಇಲ್ಲ ತೊಂದರೆ ಒದ್ದೆಯಾಗಬಹುದು ದೊಡ್ಡ ಮಳೆಯು ಬಂದರೆ
ಎಲ್ಲ ಕಾಲದಲ್ಲು ಕವಿತೆ ಕಾದುಕೊಳ್ಳಿರಿ ಯಾರೆ ನಿಮ್ಮ ನೋಯಿಸಲಿ ಹಾಡಿಕೊಳ್ಳಿರಿ… ಕಾವ್ಯವಿರದ ಲೋಕವ ನರ ತಾಳಲಾರನು ಒಂದು ಕವಿತೆ ಕಾಡಬಹುದು ಇಡೀ ಬಾಳನು ಒಂದು ಕವಿತೆ ಕಾಯಬಹುದು ಇಡೀ ಬಾಳನು

-ಚಿಂತಾಮಣಿ ಕೊಡ್ಲೆಕೆರೆ, ಉತ್ತರ ಕನ್ನಡ
