
ಬಳ್ಳಾರಿ, ಸೆ. 28: ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ತಾಲೂಕಿನ ದಮ್ಮೂರು ಗ್ರಾಮದ ಶ್ರೀ ಸದ್ಗುರು ವೆಂಕಪ್ಪ ತಾತನ ಆಶ್ರಮದಲ್ಲಿ ಆಯೋಜಿಸಿರುವ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ–2026ಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಬಿರಾರ್ಥಿಗಳು ಸಮಯಪಾಲನೆ, ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆಯೊಂದಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸಾಹೇಬ ಅಲಿ ಎಚ್. ನಿರಗುಡಿ ಅವರು ಶಿಕ್ಷಣದ ಮೌಲ್ಯಗಳ ಕುರಿತು ಮಾತನಾಡಿ, ಶಿಕ್ಷಣವು ಕೇವಲ ಜ್ಞಾನ ಸಂಪಾದನೆಗೆ ಸೀಮಿತವಾಗದೆ ವ್ಯಕ್ತಿತ್ವ ನಿರ್ಮಾಣ ಹಾಗೂ ಉತ್ತಮ ನಾಗರಿಕರ ರೂಪಿಸುವಿಕೆಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಶಿಬಿರದ ನಿರ್ದೇಶಕರಾದ ಡಾ. ಅಶ್ವ ರಾಮು ಅವರು ದಮ್ಮೂರು ಗ್ರಾಮದ ಸ್ಥಳನಾಮ, ಗ್ರಾಮದ ಐತಿಹಾಸಿಕ ಹಿನ್ನೆಲೆ ಹಾಗೂ ಶ್ರೀ ಸದ್ಗುರು ವೆಂಕಪ್ಪ ತಾತನ ಚರಿತ್ರೆ ಮತ್ತು ಸೇವಾ ಪರಂಪರೆ ಕುರಿತು ವಿವರಿಸಿದರು. ಪೌರತ್ವ ತರಬೇತಿ ಶಿಬಿರದ ಉದ್ದೇಶ, ಮಹತ್ವ ಹಾಗೂ ಮೂರು ದಿನಗಳ ಶಿಬಿರದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯೂ ಭಾರತೀಯ ಸಂವಿಧಾನದ ಆಶಯಗಳನ್ನು ಅರಿತುಕೊಂಡು, ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ಪಾಲಿಸಬೇಕು. ಉತ್ತಮ ನಾಗರಿಕನಾಗಿ ಸಮಾಜದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ಕೌಶಲ್ಯಾಧಾರಿತ ಜ್ಞಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮಾತನಾಡುವ ಕಲೆ, ನಿರೂಪಣೆ ಮತ್ತು ವೇದಿಕೆ ಕೌಶಲ್ಯ, ವರದಿಗಾರಿಕೆ ಕೌಶಲ್ಯ, ತರಗತಿ ನಿರ್ವಹಣಾ ಕೌಶಲ್ಯ ಹಾಗೂ ಮೊಬೈಲ್ ಫೋಟೋಗ್ರಫಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಹೆಸರಾಂತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಹಾಗೂ ತರಬೇತಿ ನೀಡಲಾಗುವುದು. ಪ್ರಶಿಕ್ಷಣಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌಸಿಯಾ ಎಜುಕೇಶನ್ ಮೈನಾರಿಟಿ ಸಂಸ್ಥೆಯ ಕಾರ್ಯದರ್ಶಿ ತಾಜುದ್ದೀನ್ ಪಿ., ಸಂಸ್ಥೆಯ ಅಧ್ಯಕ್ಷರಾದ ಆಲ್ಮಸ್ ತಬಸ್ಸುಮ್, ಹಣಕಾಸು ವಿಭಾಗದ ಉಮೇಮ ಜೈಬ್ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಶಿಬಿರದ ಸಂಯೋಜಕರಾದ ಆಂಥೋನಿ ಐ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ರೆಡ್ಡಿ ಸ್ವಾಗತಿಸಿದರು. ಗೌಸಿಯಾ ಬಾನು ನಿರೂಪಿಸಿದರು. ಶ್ರೀವಾಣಿ ವಂದನಾರ್ಪಣೆ ಸಲ್ಲಿಸಿದರು.
—–
