
ಬಳ್ಳಾರಿ, ಸೆ. 29: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಉತ್ತಮ ಛಾಯಾಚಿತ್ರಕ್ಕೆ ಸೃಜನಶೀಲ ದೃಷ್ಟಿಕೋನ ಅತ್ಯಗತ್ಯ ಎಂದು ಅಂತಾರಾಷ್ಟ್ರೀಯ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರು ಹೇಳಿದರು.
ಅವರು ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಮಂಗಳವಾರ ತಾಲೂಕಿನ ದಮ್ಮೂರು ಗ್ರಾಮದ ಶ್ರೀ ಸದ್ಗುರು ವೆಂಕಪ್ಪ ತಾತನ ಆಶ್ರಮದಲ್ಲಿ ಆಯೋಜಿಸಿರುವ ಮೂರು ದಿನಗಳ ಪೌರತ್ವ ತರಬೇತಿ ಶಿಬಿರದ ಎರಡನೇ ದಿನ ‘ಮೊಬೈಲ್ ಫೋಟೊಗ್ರಫಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬೆಳಕಿನ ಅರಿವು, ಸೂಕ್ತ ಸಮಯದ ಆಯ್ಕೆ ಮತ್ತು ಛಾಯಾಗ್ರಹಣದ ತಾಂತ್ರಿಕ ಜ್ಞಾನ ಅತ್ಯಂತ ಮುಖ್ಯ ಎಂದು ಅಭಿಪ್ರಾಯ ಪಟ್ಟರು.

ಮೊಬೈಲ್ ಫೋಟೋಗ್ರಫಿ ಪ್ರಸ್ತುತ ಕ್ರಾಂತಿಕಾರಕ ಬೆಳವಣಿಗೆ ಕಂಡಿದೆ ಎಂದ ಅವರು ಆಧುನಿಕ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳ ಮೂಲಕ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಸವಾಲೊಡ್ಡುವಂತಹ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸೆನ್ಸಾರ್ ಹೊಂದಿರುವ ಹಲವು ಮೊಬೈಲ್‌ಗಳು ಲಭ್ಯವಿವೆ. ಆಯಾ ಮೊಬೈಲ್‌ಗಳ ಕ್ಯಾಮೆರಾ ವೈಶಿಷ್ಟ್ಯಗಳು ಹಾಗೂ ಸಾಮರ್ಥ್ಯಗಳನ್ನು ಸರಿಯಾಗಿ ತಿಳಿದುಕೊಂಡು ಬಳಸಿದರೆ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದು ಎಂದರು.
ಮೊಬೈಲ್ ಫೋಟೋಗ್ರಫಿಯ ಬೆಳವಣಿಗೆಯಿಂದಾಗಿ ಇಂದು ಬಹುತೇಕ ಎಲ್ಲರೂ ಸುಲಭವಾಗಿ ಛಾಯಾಚಿತ್ರ ತೆಗೆಯುವಂತಾಗಿದೆ. ಇದರಿಂದ ಛಾಯಾಗ್ರಹಣ ಕ್ಷೇತ್ರ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿರುವುದು ಒಳ್ಳೆಯ ಬೆಳವಣಿಗೆಯಾದರೂ, ವೃತ್ತಿಪರ ಛಾಯಾಗ್ರಾಹಕರ ವೃತ್ತಿಯ ಮೇಲೆ ಇದರ ವ್ಯತಿರಿಕ್ತ ಪರಿಣಾಮವೂ ಉಂಟಾಗಿದೆ ಎಂದು ಬಣಗಾರ ವಿಷಾದಿಸಿದರು.

ವರದಿಗಾರಿಕೆಯ ಕೌಶಲ್ಯಗಳು ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು,
ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ಮುದ್ರಣ ಮಾಧ್ಯಮಗಳ ಓದು ನೀಡುವ ಜ್ಞಾನ ಮತ್ತು ಶಿಸ್ತು ಅನನ್ಯವಾದದ್ದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ನಿರಂತರವಾಗಿ ಓದುವುದರಿಂದ ಜ್ಞಾನ ವಿಶಾಲವಾಗುತ್ತದೆ ಮತ್ತು ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಹೇಳಿದರು.
ಪತ್ರಿಕೆ ಮತ್ತು ನಿಯತಕಾಲಿಕೆಗಳ ಓದು ಮನಸ್ಸಿಗೆ ಉತ್ತಮ ವ್ಯಾಯಾಮವಿದ್ದಂತೆ. ಕೇವಲ ಮಾಹಿತಿಯನ್ನಷ್ಟೇ ಅಲ್ಲದೆ ಬದುಕಿಗೆ ಬೇಕಾದ ವಿವೇಕವನ್ನೂ ನೀಡುತ್ತದೆ ಎಂದು ತಿಳಿಸಿದರು.
ನಿಯಮಿತ ಓದಿನಿಂದ ಹೊಸ ಪದಗಳ ಪರಿಚಯದ ಜತೆ ಶಬ್ದ ಭಂಡಾರ ಹೆಚ್ಚುತ್ತದೆ ಹಾಗೂ ವಾಕ್ಯ ರಚನೆಯ ಕಲೆ ಸಿದ್ಧಿಸುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಮತ್ತು ಐಎಎಸ್, ಕೆಎಎಸ್, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಪತ್ರಿಕೆಗಳು ವರದಾನ. ಓದು ಜ್ಞಾನದ ಮಟ್ಟವನ್ನು ಹೆಚ್ಚಿಸಿ ಪರೀಕ್ಷೆಗಳಲ್ಲಿ ಯಶಸ್ಸು ತಂದುಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಯಾಗಿದ್ದ ವಿಎಸ್.ಕೆ ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ
ಡಾ. ಪ್ರಶಾಂತ ಕುಮಾರ್ ಟಿ.ಎಂ ಅವರು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ
ಗೌಸಿಯಾಬೇಗಂ ಅವರು ಅಧ್ಯಕ್ಷತೆ ವಹಿಸಿದ್ದರು .
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕರೂ ಆದ ಪ್ರಾಂಶುಪಾಲ ಡಾ. ಅಶ್ವ ರಾಮು, ಸಂಸ್ಥೆಯ ಅಧ್ಯಕ್ಷರಾದ ಆಲ್ಮಸ್ ತಬಸ್ಸುಮ್, ಕಾರ್ಯದರ್ಶಿಗಳಾದ ಪಿ. ತಾಜುದ್ದೀನ್, ಸಹಾಯಕ ಪ್ರಾಧ್ಯಾಪಕರಾದ ಆಂಥೋನಿ ಐ, ಆಲಂ ಬಾಷಾ, ಸೈಯದ್ ಹುಸೇನ್, ಭೀಮಪ್ಪ , ನಾಗವೇಣಿ , ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಪ್ರಶಿಕ್ಷಣಾರ್ಥಿ ಎರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವಣಿ ನಿರೂಪಿಸಿದರು. ಅಬೀದ್ ಹುಸೇನ್ ಅತಿಥಿಗಳನ್ನು ಪರಿಚಯಿಸಿದರು. ಮಂಜುನಾಥ ಸ್ವಾಗತಿಸಿದರು. ಅಂಬರೀಶ್ ವಂದಿಸಿದರು.
