ಬಳ್ಳಾರಿ, ಅ. 21: ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸಿ. ಜಿ. ಹಂಪಣ್ಣ ಅವರು ಆಯ್ಕೆಯಾಗಿದ್ದಾರೆ.
ಸಮ್ಮೇಳನ ಆಯೋಜನೆ ಕುರಿತು ನಗರದ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಂಪಣ್ಣ ಅವರನ್ನು ಆಯ್ಕೆಮಾಡಲಾಯಿತು ಎಂದು ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಅವರು ತಿಳಿಸಿದರು.
ಸಭೆಯಲ್ಲಿ ಹಿರಿಯ ಪರ್ತಕರ್ತರು, ಸಾಹಿತಿಗಳು, ಚಲನಚಿತ್ರ ಕಥೆಗಾರರು ಹಾಗೂ ನಿರ್ಮಾಪಕ ನಿರ್ದೇಶಕರಾದ ಚೇಳ್ಳಗುರ್ಕಿಯ ಸಿ.ಜಿ. ಹಂಪಣ್ಣ, ಹರಪನಹಳ್ಳಿಯ ಸಾಹಿತಿ ರಾಮನಮಲಿ, ಪರ್ತಕರ್ತ, ಕವಿ ಪಿ. ಆರ್. ವೆಂಕಟೇಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ. ಕೊಟ್ರಪ್ಪ ಅವರ ಹೆಸರುಗಳನ್ನು ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿ ಚರ್ಚಿಸಿದರು.
ಅಂತಿಮವಾಗಿ ಸಿ. ಜಿ. ಹಂಪಣ್ಣ ಅವರನ್ನು ಸರ್ವಾನುಮತದಿಂದ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಾಹಿತ್ಯ ಸಮ್ಮೇಳನವು ನ. 14 ಮತ್ತು 15ರಂದು ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ನಡೆಸಲು ಸಭೆ ತೀರ್ಮಾನಿಸಿತು.
ಸಿ. ಜಿ. ಹಂಪಣ್ಣನವರ ಸಂಕ್ಷಿಪ್ತ ಪರಿಚಯ: ಬಳ್ಳಾರಿ ತಾಲೂಕಿನ,
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚೇಳ್ಳಗುರ್ಕಿಯಲ್ಲಿ 27-08-1938 ರಂದು ಸಿ.ಜಿ. ಹಂಪಣ್ಣನವರು ಜನಿಸಿದರು. ಮದ್ರಾಸ್ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 1958ರಲ್ಲಿ ಉತ್ತೀರ್ಣರಾಗಿ, 66 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜತೆಗೆ ಸಾಹಿತ್ಯ ರಚನೆ, ಚಲನಚಿತ್ರ ನಿರ್ಮಾಣ, ಚಲನಚಿತ್ರ ಹಂಚಿಕೆ, ಪ್ರದರ್ಶನ ಸೇರದಂತೆ ಹತ್ತಾರು ಸಂಘ ಸಂಸ್ಥೆಗಳ ನಿಕಟ ಒಡನಾಟವನ್ನು ಹೊಂದಿದ್ದಾರೆ.
ಬೆಂಗಳೂರಿನ ಮಲೆನಾಡು ಮಾಸಪತ್ರಿಕೆಯ ಸಹ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದ ಉಪ ಸಂಪಾದಕರಾಗಿ, ಈ ನಮ್ಮ ಕನ್ನಡನಾಡು ಪತ್ರಿಕೆಯ ಹಿರಿಯ ಉಪ ಸಂಪಾದಕರಾಗಿ ಪತ್ರಿಕಾ ರಂಗದಲ್ಲಿ ಸೇವೆಸಲ್ಲಿಸಿರುವರು. ಮತ್ತು ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿರುವ ಹಂಪಣ್ಣ ಅವರು
ಬಳ್ಳಾರಿ ಜಿಲ್ಲಾ ಸಮಾಚಾರ, ಚಿತ್ರಸುಧಾ, ವಿಜಯನಗರ ಎಕ್ಸ್ ಪ್ರೆಸ್, ಕನ್ನಡ ಸಿಂಧೂರ ಪತ್ರಿಕೆಯನ್ನು ಸ್ವತಂತ್ರವಾಗಿ ನಡೆಸಿದ ಅನುಭವಿ ಸಜ್ಜನರು.
ಕನ್ನಡ ನಾಡು ಸೊಬಗಿನ ಬೀಡು, ಪ್ರೇಮಪಾಶ, ದಾರಿದೀಪ, ವಿಧಿವಿಲಾಸ, ನಂದನವನ, ಕಾಣಿಕೆ, ಒಡೆಯಿತು ಒಲವಿನ ಕನ್ನಡಿ, ದೈವ ಸಂಕಲ್ಪ ಹೀಗೆ ಹತ್ತೊಂಬತ್ತು ಅಧಿಕ ಸಾಹಿತ್ಯ ಕೃತಿಗಳನ್ನು ರಚಿಸಿರುವರು. 2011 ರಲ್ಲಿ ‘ನೆನಪಿನಂಗಳ’ ಆತ್ಮಕಥೆ-1 ಮತ್ತು ಸವಿ ನೆನಪು ಆತ್ಮಕಥೆ -2 ಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ.
ಉಡುಗೊರೆ, ಶ್ರಮಜೀವಿ, ಸವಿಜೇನು, ಗಡಿನಾಡ ಕನ್ನಡಿಗ ಇವರಿಗೆ ಸಂದ ಅಭಿನಂದನಾ ಗ್ರಂಥಗಳಾಗಿವೆ.
ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಹಂಪಣ್ಣ ಅವರು, ಸಂಡೂರು ವಿರಕ್ತ ಮಠದಿಂದ “ಬಸವ ಬೆಳಗು” ಪ್ರಶಸ್ತಿ, ಇಳಕಲ್ ಮಠದಿಂದ ಮಹಾಂತ ಶ್ರೀ ಪ್ರಶಸ್ತಿ, ಬಸವಸಿರಿ ಪ್ರಶಸ್ತಿ, ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ನೀಡುವ ರಾಜ್ಯಮಟ್ಟದ ಡಾ. ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿ, ಬೆಂಗಳೂರಿನ ಪತ್ರಕರ್ತರ ವೇದಿಕೆಯ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ, ಶ್ರೀಕೃಷ್ಣದೇವರಾಯ ಪ್ರಶಸ್ತಿ, ಸಂಗೀತ ಭಾರತಿ ಹೊಸಪೇಟೆ ಇವರಿಂದ ‘ಶಂಕರ-ಭಾರ್ಗವ ಪ್ರಶಸ್ತಿ, ಡಾ. ಡಿ.ವಿ. ಗುಂಡಪ್ಪ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅಭಿನಂದನೆ: 88ರ ಹರೆಯದ ಹಿರಿಯ ಪತ್ರಕರ್ತ, ಸಾಹಿತಿ ಸಿ. ಜಿ. ಹಂಪಣ್ಣ ಅವರು 23ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಜಿಲ್ಲೆಯ ಗಣ್ಯರು, ಸಾಹಿತಿಗಳು, ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳು, ಪದಾಧಿಕಾರಿಗಳು ಸ್ವಾಗತಿಸಿ ಅಭಿನಂದಿಸಿದ್ದಾರೆ.
