ಅನುದಿನ ಕವನ-೨೦೦೦, ಹಿರಿಯ ಕವಿ: ಟಿ. ಕೆ. ಗಂಗಾಧರ ಪತ್ತಾರ, ಬಳ್ಳಾರಿ, ಕವನದ ಶೀರ್ಷಿಕೆ: ವಾಸ್ತವಿಕತೆ

ಕರ್ನಾಟಕ ಕಹಳೆ ಡಾಟ್ ಕಾಮ್ ಜನಪ್ರಿಯ ಅನುದಿನ ಕವನ ಕಾಲಂ ಇಂದು(ಅ.18) ದಾಖಲೆಯ 2000 ನೇ ಕವನವನ್ನು ಹೆಮ್ಮೆಯಿಂದ ಪ್ರಕಟಿಸುತ್ತಿದೆ.  ಪ್ರತಿದಿನವೂ ಕವಿತೆಗಳು ಬೆಳಕು ಕಾಣುವ ಈ ಕಾಲಂ ಗೆ ಚೆಂದದ ‘ಅನುದಿನ ಕವನ’ ಎಂದು ಹೆಸರಿಟ್ಟ ಹಿರಿಯ ಕವಿ ಟಿ.ಕೆ.ಗಂಗಾಧರ ಪತ್ತಾರ್ ಅವರ ‘ವಾಸ್ತವಿಕತೆ’ ಪದ್ಯವನ್ನು ಪ್ರಕಟಿಸುವ ಮೂಲಕ ಸಂಭ್ರಮಿಸುತ್ತಿದ್ದೇವೆ. ನೆಟ್ ವರ್ಕ್ ಮತ್ತಿತರ ತಾಂತ್ರಿಕ ಕಾರಣಗಳನ್ನು ಹೊರತು ಪಡಿಸಿದರೆ ನಿರಂತರವಾಗಿ 2000 ಕವಿತೆಗಳು ಪ್ರಕಟವಾಗಿರುವುದನ್ನು ಅವಲೋಕಿಸಿದರೆ ಸೋಜಿಗವೆನಿಸುತ್ತಿದೆ. ಎರಡು ಸಾವಿರ ದಿನಗಳಲ್ಲಿ ಸುಮಾರು ಮೂರು ಸಾವಿರ ಕವಿತೆಗಳನ್ನು ಓದಿರುವುದು ನನ್ನ ಭಾಗ್ಯ!  ಹಿರಿಯ-ಕಿರಿಯ ಕವಿಗಳ ಮತ್ತು ಸಹೃದಯ ಕಾವ್ಯ ಪ್ರಿಯರ ಬೆಂಬಲ, ಸಹಕಾರವಿದ್ದರೆ ಅನುದಿನ ಕವನ ಕಾಲಂ ಮುಂದುವರೆಯುತ್ತದೆ ಎಂದು ಹೇಳ‌ ಬಯಸುತ್ತೇನೆ. ಈವರೆಗೆ karnatakakahale.com ಗೆ ಉತ್ತೇಜಿಸಿದ ಎಲ್ಲಾ ಸಾಹಿತ್ಯ, ಸಾಂಸ್ಕೃತಿಕ ಮನಸುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

(ಸಂಪಾದಕರು)

🍀🌺🍀🌹🙏🍀💐🌷

ವಾಸ್ತವಿಕತೆ

ವಾಸ್ತವಿಕತೆ! ಏನು ? ಹಾಗೆಂದರೆ……..?                  ಅದು ಎಲ್ಲಿದೆ ? ಹೇಗಿದೆ ? ಅಸಲು ನಕಲಿಗೆ ಬೇಸ್ತು ಬಿದ್ದು (ಬೇ)ಸತ್ತು ಹೋಗಿದೆ                                  ಮಂತ್ರ ತಂತ್ರ ಕುತಂತ್ರಗಳ ಬಲೆಯಲ್ಲಿ ಸಿಲುಕಿ      ಯಂತ್ರ ಯುಗದಿ ಅತಂತ್ರವಾಗಿದೆ
ಮಂಪರು ಬರುವಂತೆ ಕುಡಿದು
ಕುರಿ-ಕೋಳಿಗಳ ಮೂಳೆ ಕಡಿದು
ಜಂಪರು ಹರಿದು ಹಾಡ ಹಗಲೇ ವ್ಯಭಿಚಾರ ಮಾಡುವವರ ನಡುವೆ…….. ಬಿದ್ದವರನೊದ್ದು,  ಎದ್ದವರ ಗುದ್ದಿ ಬೀಳಿಸಿ…….. ಗದ್ದುಗೆಯನೇರಿ ಮೆರೆವ ಹದ್ದು ಗೂಬೆಗಳ ನಡುವೆ…….. ಗಾಂಧೀ ತತ್ವ ಮರೆತು ಗಾದೀ ತತ್ವಕ್ಕಾಗಿ ಬೀದೀ ಜಗಳಕ್ಕಿಳಿದ            ಖಾದಿಗಳ ನಡುವೆ…….. ‘ಖಾದಿ’ಗಳ ಜೊಲ್ಲಿಗೆ        ಹಲ್ಲು ಕಿರಿಯುವ ‘ಖಾಕೀ’ ಗಾರ್ದಭಗಳ ನಡುವೆ…….. ಧರ್ಮದ ಅಫೀಮಿನಿಂದ ಜನರ ಮರುಳು ಮಾಡುವ ‘ಕಾವಿ’ಗಳ ಮಠದೊಳಗೆ…….. ವಾಸ್ತವಿಕತೆ ತನ್ನ ಅಸ್ತಿತ್ವವನ್ನೇ ಕಳಕೊಂಡಿದೆ ವಾಸ್ತವಿಕತೆ!              ಎಲ್ಲಿದೆ ? …….! ಹೇಗಿದೆ? ……..!

(ಬಳ್ಳಾರಿ ಜಿಲ್ಲೆಯ ಪ್ರಾತಿನಿಧಿಕ ಕವಿಯಾಗಿ ಭಾಗವಹಿಸಿದ ವಿಶ್ವ ವಿಖ್ಯಾತ ಮೈಸೂರು ದಸರಾ-೨೦೦೫ ಮಹೋತ್ಸವದ ಪ್ರತಿಷ್ಠಿತ ಕವಿಗೋಷ್ಠಿಯಲ್ಲಿ ವಾಚಿಸಿದ-ಆ ಸಂದರ್ಭದಲ್ಲಿ ಹೊರತಂದ “ಕೃಷ್ಣೆ-ತುಂಗೆ” ಕವನ ಸಂಗ್ರಹದಲ್ಲಿ ಪ್ರಕಟಿತ ಕವನ)

-ಟಿ.ಕೆ. ಗಂಗಾಧರ ಪತ್ತಾರ್, ಬಳ್ಳಾರಿ

Leave a Reply

Your email address will not be published. Required fields are marked *