ಅನುದಿನ ಕವನ-೧೯೯೯, ಕವಿ: ಮಹೇಶ ಬಳ್ಳಾರಿ, ಕೊಪ್ಪಳ, ಕವನದ ಶೀರ್ಷಿಕೆ: ಹೌದು ಎಷ್ಟು ದಿನ

ಹೌದು ಎಷ್ಟು ದಿನ

ಹೌದು
ಎಷ್ಟು ದಿನ
ತೋಳಗಳ ತಾಳಕ್ಕೆ
ತೊಳಲಾಟದಿ
ಬದುಕ ಹೆಜ್ಜೆಗಳನ್ನು ಗೌಣವಾಗಿಸುವುದು

ಇನ್ನೆಷ್ಟು ದಿನ
ನೆಲಕ್ಕೆ
ರಕ್ತದರ್ಪಣದ
ಹರಕೆಯಾಗಬೇಕು

ಬಿಗಿ ಉಸಿರು
ಬಿಗಿದಪ್ಪಿ ಹಿಡಿದ ಜೀವ
ಎಲ್ಲಿ – ಯಾರ ಪಾಲಿನ
ಎಡೆಯಾಗುವುದೋ?
ಶತಮಾನಗಳ ಬೇಗುದಿಗೆ
ಸಾವಿನ ಚರಣಗಳಿವೆ
ಹತಾಶೆಯ ಬವಣೆಗಳಿವೆ

ನಮ್ಮೆದೆಯ ನೋವಿನ
ಹಾಡುಗಳಿಗೆ
ಅಸಂಖ್ಯಾತ
ಮಡುವುಗಳಿವೆ

ನೆಮ್ಮದಿಗೆ ನಾಳೆಗಳಿಗಾಗಿ
ಅರಸಿ
ಕಾದ ಹೆಂಚಿನ ಮೇಲೆ
ಕಾದು ನಿಂತಿದ್ದೇವೆ.

ಬೊಬ್ಬೆಯೆದ್ದ ಕಾಲುಗಳಿಂದ
ಚಿಮ್ಮಿದ ರಕ್ತ
ಕಾಲುವೆಗಳ ಮೂಲಕ ಹರಿದು
ನಿಮ್ಮರಮನೆಯ ಮರಗಳು
ನೆಲವನ್ನು ನೋಡದಷ್ಟು
ಎತ್ತರಕ್ಕೇರಿ
ಮುಗಿಲಿಗೆ ಮುಖ ಮಾಡಿವೆ

ನೆನಪಿರಲಿ
ಬೇರುಗಳಿನ್ನೂ
ನೆಲದಲ್ಲಿವೆ
ನಾವೀಗ ನಿಮ್ಮ ಬೇರುಗಳ
ಮಗ್ಗಲು ನಿಂತಿದ್ದೇವೆ

-ಮಹೇಶ ಬಳ್ಳಾರಿ, ಕೊಪ್ಪಳ

    (2026ರ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ)

Leave a Reply

Your email address will not be published. Required fields are marked *