ಅನುದಿನ ಕವನ-೨೦೦೨, ಕವಿ: ಎ. ಎನ್.‌ರಮೇಶ್, ಗುಬ್ಬಿ, ಕವನದ ಶೀರ್ಷಿಕ: ದಸರಾ ಬೊಂಬೆಗಳು

“ಒಲುಮೆಯ ಅಕ್ಷರಬಂಧುಗಳಿಗೆ ನಲ್ಮೆಯ ನಾಡಹಬ್ಬ ದಸರೆಯ ಹಾರ್ದಿಕ ಶುಭಕಾಮನೆಗಳು. ವಿಜಯದಶಮಿಯ ಹೃತ್ಪೂರ್ವಕ ಶುಭಾಶಯಗಳು. ನಮ್ಮ ಹಳೇ ಮೈಸೂರು ಭಾಗದಲ್ಲಿ, ದಕ್ಷಿಣ ಕರ್ನಾಟಕದಲ್ಲಿ ನವರಾತ್ರಿಯ ವೈಶಿಷ್ಟ್ಯವೇ ದಸರೆಯ ಬೊಂಬೆಗಳು. ನಮ್ಮ ವಿಶಿಷ್ಟ ಸಂಪ್ರದಾಯ ಪರಂಪರೆಗಳನ್ನು ಬಿಂಬಿಸುತ್ತಾ, ನಾಡಹಬ್ಬದಂದು ಈ ಮಣ್ಣಿನ ಮೇರು ಸಂಸ್ಕೃತಿಯನ್ನು ಸಾರುವ ತೋರುವ ಈ ಅಕ್ಷರಪ್ರಣತೆಯನ್ನು ನಿಮ್ಮ ಎದೆಯಂಗಳಕ್ಕೆ ಅರ್ಪಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ..”

– ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

“ದಸರಾ ಬೊಂಬೆಗಳು”

ಮೈಸೂರಿನ ಅರಮನೆಯಂಗಳದಿ
ಆಕರ್ಷಕ ಅದ್ದೂರಿ ಜಂಬೂಸವಾರಿ.!
ಕರುನಾಡ ಮನೆ-ಮನೆಯಂಗಳದಿ
ಬೊಂಬೆಗಳ ಸಡಗರ ಅಂಬಾರಿ.!!

ವರ್ಷಕೊಮ್ಮೆ ಪೆಟ್ಟಿಗೆಯಿಂದ ಆಚೆಗೆ
ದಸರೆಗಾಗಿ ಬರುವ ಬೊಂಬೆ-ಬಳಗ.!
ನವರಾತ್ರಿಗಳಲು ಮನೆ-ಮನಗಳಲಿ
ಮೊಳಗಿಸುವರು ನವ ಮಧುರರಾಗ.!!

ಬಗೆ-ಬಗೆ ಬಣ್ಣ, ವಿಧ-ವಿಧ ಆಕಾರ
ಗೊಂಬೆಗಳಿಗಿಲ್ಲಿ ಸೊಬಗಿನಲಂಕಾರ.!
ಬಣ್ಣಿಸಲಾಗದು ಬೊಂಬೆಗಳ ವೈಭವ
ಹಿರಿಯರೂ ಮಕ್ಕಳಾಗುವ ಆನುಭಾವ.!!

ಹೆಂಗಸರಿಗೆ ಸಡಗರ ಕುಂಕುಮಾರಿಶಿನ
ಚಿಣ್ಣರಿಗೆ ನಿತ್ಯ ಸವಿ ಬೊಂಬೆಬಾಗಿನ.!
ಮನೆಗಳಲಿ ಹೊಮ್ಮಿದೆ ನಗೆಝೇಂಕಾರ
ನಾಡಿನೆಲ್ಲೆಡೆ ಮೊರೆದಿದೆ ಸಿರಿಸಂಸ್ಕಾರ.!!

ಅದೆಷ್ಟು ಸೊಗಸು ಈ ನಾಡು-ಸಂಸ್ಕೃತಿ
ಬದುಕ ಆಸ್ವಾಧಿಸಿ ಸಂಭ್ರಮಿಪ ರೀತಿನೀತಿ.!
ಬೊಂಬೆಗಳೊಂದಿಗೆ ಗೊಂಬೆಯಾಗುವ ಪರಿ
ಉಲಿವ ನಲಿವ ಕುಣಿವ ಮೈಮರೆವ ಐಸಿರಿ.!!

ನವರಾತ್ರಿಯ ನಿತ್ಯನೂತನ ನವಸಂಭ್ರಮ
ಪ್ರತಿ ಎದೆಯಂಗಳದಿ ಸಂತಸದ ಚಂದ್ರಮ
ವಿಜಯದಶಮಿಯ ಸಡಗರದ ಮೇರುಶೃಂಗ
ಬನ್ನಿಪತ್ರೆ ಹಂಚಿ ಪುನೀತರಾಗುವ ಸುಗ್ಗಿಸಗ್ಗ.!

ನಾಡಹಬ್ಬ ದಸರೆಯಲಿ ಏನೆಲ್ಲಾ ವಿಶಿಷ್ಟ್ಯ
ಸಾವಿರ ಸಾವಿರದ ತತ್ವ-ಸತ್ವಗಳ ವಿಸ್ಮಯ
ಸತ್ಯ ಪ್ರೀತಿ ತ್ಯಾಗ ಮಮಕಾರಗಳ ವಿಜಯ
ಅಂಧಕಾರದ ವಿರುದ್ದ ಅರಿವಿನ ದಿಗ್ವಿಜಯ.!

ವರುಷ-ವರುಷವೂ ಭವ್ಯದಿವ್ಯ ಈದಶದಿನ
ಬಾಳಿಗೆ ಎಷ್ಟೆಲ್ಲಾ ತತ್ವಾದರ್ಶ ಸಂಕೀರ್ತನ
ಈ ಮಣ್ಣಿನ ಅನನ್ಯ ಪರಂಪರೆಯ ದರ್ಶನ
ಬಾಳು ಬಂಗಾರವಾಗಿಸುವ ಬೆಳಕ ದಿಗ್ದರ್ಶನ.!

-ಎ.ಎನ್.ರಮೇಶ್, ಗುಬ್ಬಿ

Leave a Reply

Your email address will not be published. Required fields are marked *