ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗಾಗಿ ಗುರುವಾರ ಆರೋಗ್ಯ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಂಡ್ಯ ಜಿಲ್ಲೆಯ ರಾಷ್ಟ್ರೀಯ ಪುರುಷರ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷೆ ರಜನಿರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ರಾಜೇಶ್ ಹೊಸಮನಿ ಹಾಗೂ ಸಿವಿಲ್ ನ್ಯಾಯಾಧೀಶ ದೇವರೆಡ್ಡಿ ಉದ್ಘಾಟಿಸಿದರು. ವೈದ್ಯಾಧಿಕಾರಿಗಳಾದ ಡಾ. ಅಲಕಾನಂದ ಮತ್ತು ಡಾ. ಇಂದ್ರಾಣಿ ಅವರು ಕೈದಿಗಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯದ ಕುರಿತು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ರಜನಿರಾಜ್ ಅವರು ವಿಚಾರಣಾಧೀನ ಆರೋಪಿಯ ಬಿಡುಗಡೆಗೆ ಅಗತ್ಯವಿದ್ದ ₹20,000 ದಂಡದ ಮೊತ್ತವನ್ನು ಜೈಲು ಅಧೀಕ್ಷಕ ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿ, ಬಿಡುಗಡೆಗೆ ನೆರವಾದರು.
ರಜನಿರಾಜ್ ಅವರು ಈ ಹಿಂದೆಯೂ ಬಳ್ಳಾರಿ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿದ್ದರು. ಅಲ್ಲದೆ, ಮೂವರು ಕೈದಿಗಳ ದಂಡ ಪಾವತಿಸಿ ಬಿಡುಗಡೆಗೆ ನೆರವಾಗಿದ್ದರು. ಮಂಗಳೂರು, ಗದಗ, ವಿಜಯಪುರ, ರಾಮನಗರ ಹಾಗೂ ಮಂಡ್ಯ ಸೇರಿದಂತೆ ವಿವಿಧ ಕಾರಾಗೃಹಗಳಿಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ, ದಂಡ ಪಾವತಿಸಲು ಸಾಧ್ಯವಾಗದ ಕೈದಿಗಳ ನೆರವಿಗೂ ಮುಂದಾಗಿದ್ದಾರೆ.
ಇವರ ಸೇವೆಯನ್ನು ಗುರುತಿಸಿದ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಮೂರ್ತಿ ಅವರು ರಜನಿರಾಜ್ ಅವರನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ಕಂಟೋನ್ಮೆಂಟ್ನ ರಾಜೇಶ್ ಎಂ.ಪಿ., ಶ್ರೀನಿವಾಸ್ ರೆಡ್ಡಿ, ಶಿವಾನಂದ, ಬಳ್ಳಾರಿ ಪುರುಷರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಉಜ್ವಲ ಶ್ರೀಧರ್, ನಿರಂಜನ್, ಶಶಿಧರ್, ಶಿಕ್ಷಕ ಭೈರಪ್ಪ, ಶಂಕರ್ ನಂದಿಹಾಳ್ ಸೇರಿದಂತೆ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
