ಅನುದಿನ ಕವನ-೨೦೧೧, ಕವಿ:ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ದಿವ್ಯ ಸಮ್ಮಿಲನ…!

“ಬರೆಯುತ್ತಲೇ ಅವರ್ಣನೀಯ ಆನಂದಾನುಭೂತಿಯ ಸ್ಫುರಿಸಿದ ಮಾರ್ಮಿಕ ಕವಿತೆಯಿದು. ಬದುಕು-ಬೆಳಕಿನ ದಿವ್ಯ ಮಧುರಾನುಭೂತಿಯ ಸಂಚಲನವಾಗಿಸುವ ದೈವಿಕ ಭಾವಗೀತೆಯಿದು. ಹೆಚ್ಚೇನೂ ಹೇಳಲಾರೆ.. ಏಕೆಂದರೆ ಇದು ನಿಮ್ಮೆದೆಯ ನಿತ್ಯ ಸತ್ಯ ರಿಂಗಣವೂ ಹೌದು. ಜೀವ-ಜೀವನಗಳ ಯುಗ ಯುಗದ ಜಗದ ಸತ್ಯಸತ್ವ ಅನಾವರಣವೂ ಹೌದು , ಬುವಿ-ಬಾಳುಗಳ ಬೆಳಕಿನ ತತ್ವ-ಮಹತ್ವಗಳ ಅನುರಣನವೂ ಹೌದು. ಏನಂತೀರಾ..?”                                                   -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ದಿವ್ಯ ಸಮ್ಮಿಲನ…!

ಕಣದ ಋಣ, ಋಣದ ಕ್ಷಣ
ನಮ್ಮಯ ಪಾಲಿಗೆ ಇದ್ದರಷ್ಟೇ
ಆ ಆಸ್ವಾಧನೆಯ ಸಿಹಿಪಾನ
ಆನಂದಾನುಭೂತಿಯ ತಾನ.!

ಒಂದು ಕಾಳು, ಕಾಳಿನ ಕೂಳು
ನಮ್ಮ ಭಾಗಕ್ಕೆ ಇಟ್ಟಿದ್ದರಷ್ಟೇ
ಒಡಲ ರಸಾನುಭಾವಕ್ಕೆ ಲಭ್ಯ
ಸವಿಸುಖ ಸಂತೃಪ್ತಿಯ ಸಖ್ಯ.!

ಹಿಡಿ ಪ್ರೀತಿ, ಪ್ರೀತಿಯ ಜಡಿ
ನಮ್ಮೊಳಗೆ ಹನಿಸಿ ಬೆಸೆದಿದ್ದಷ್ಟೇ
ಪ್ರೇಮ ರಾಗಾನುರಾಗ ಸಾನಿಧ್ಯ
ಎದೆಯೊಲವು ನಲಿವ ಸಾಂಗತ್ಯ.!

ಹಣ ನಂಟು, ನಂಟಿನ ಗಂಟು
ವಿಧಾತ ಬಾಳಿಗೆ ನೀಡಿದಷ್ಟೇ
ಆ ಲೆಕ್ಕಾನುಲೆಕ್ಕಗಳ ಸಿರಿಭಾಗ್ಯ
ಐಶ್ವರ್ಯ ಸಂತಸ ಸೌಭಾಗ್ಯ.!

ಒಂದು ಹೆಜ್ಜೆ, ಹೆಜ್ಜೆಗೆ ಗೆಜ್ಜೆ
ನಮ್ಮ ನಡಿಗೆಗೆ ಕೊಟ್ಟಿದ್ದರಷ್ಟೇ
ಬಾಳ ಹಾದಿಗೆ ಶಕ್ತಿ ಅದಮ್ಯ
ಸಾಕಾರ ದೂರದ ಗುರಿ ಗಮ್ಯ.!

ಇಟ್ಟವಯಸು. ವಯಸಿನಾಯಸ್ಸು
ಹಣೆಯ ಬರಹ ಬರೆದಷ್ಟೇ
ಜೀವ ಜೀವನದಾ ಸತ್ಯಯಾನ
ಬದುಕಿನ ಪಯಣದ ಸವಿಗಾನ,!

ಬೆಳಕ ಕಿರಣ, ಕಿರಣ ವರೇಣ್ಯ
ನಿಯಾಮಕ ಅನುಗ್ರಹಿಸಿದರಷ್ಟೇ
ಬಾಳು ಹೊಂಬೆಳಕ ಝೇಂಕಾರ
ಸತ್ಯ ಸತ್ವ ತತ್ವಗಳ ಸಾಕ್ಷಾತ್ಕಾರ.!

ಒಳ ಚೈತನ್ಯ, ಹೊರ ಕಾರುಣ್ಯ
ಸಂಗಮಿಸಿ ಸಂಪನ್ನವಾದರಷ್ಟೇ
ಆತ್ಮಪರಮಾತ್ಮರ ದಿವ್ಯಸಮ್ಮಿಲನ
ಭವ-ಬಂಧ ಮೋಕ್ಷ ಸಂಕೀರ್ತನ.!

-ಎ.ಎನ್.ರಮೇಶ್, ಗುಬ್ಬಿ.

Leave a Reply

Your email address will not be published. Required fields are marked *