
ಬಳ್ಳಾರಿ, ನ.1: ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ನಗರದ ಹಿರಿಯ ತೊಗಲುಗೊಂಬೆಯಾಟ ಕಲಾವಿದೆ ಹುಲಿಗೆಮ್ಮ ಅವರನ್ನು ಕರ್ನಾಟಕ ಜಾನಪದ ಪರಿಷತ್ತು-ಬೆಂಗಳೂರು, ಜಿಲ್ಲಾ ಘಟಕ ಸನ್ಮಾನಿಸಿ ಗೌರವಿಸಿತು.
ಶುಕ್ರವಾರ ಸಂಜೆ ಕೊರಚಗೇರಿಯಲ್ಲಿರುವ ಹುಲಿಗೆಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು–ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಾ. ಅಶ್ವ ರಾಮು ಅವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಜಾನಪದ ಕಲಾ ಕ್ಷೇತ್ರಕ್ಕೆ ಹುಲಿಗೆಮ್ಮ ಅವರು ಸಲ್ಲಿಸಿರುವ ಅಮೂಲ್ಯ ಸೇವೆ ಹಾಗೂ ಸಾಧನೆಯನ್ನು ಇಬ್ಬರೂ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ತೊಗಲುಗೊಂಬೆ ಕಲಾವಿದ ಹೊನ್ನೂರುಸ್ವಾಮಿ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
