ಶಂಕರಘಟ್ಟ(ಕುವೆಂಪು ವಿವಿ), ನ.1: ಕನ್ನಡಿಗರ ಮನೋಧರ್ಮ ಅಭಿರುಚಿ, ಆಸಕ್ತಿ , ಹಂಬಲ ಮತ್ತು ಆಶಯಗಳು ವೈಶಿಷ್ಟ್ಯತೆಯಿಂದ ಕೂಡಿವೆ. ಹಾಗಾಗಿ ಕನ್ನಡಿಗರ ಸಹಿಷ್ಣುತೆ ಆದರ್ಶವಾದದ್ದು. ಕರ್ನಾಟಕ ವೈವಿಧ್ಯತೆಯ ನಾಡು. ಈ ನಾಡು ಹಲವು ಧರ್ಮಗಳು ಹಲವು ಮತಗಳು ಹಲವು ಸಿದ್ಧಾಂತಗಳಿಗೆ ನೆಲೆಯಾದ ನಾಡು. ಇಲ್ಲಿರುವ ಜನರಲ್ಲಿ ಐಕ್ಯತೆಯು ಮನದಾಳದಲ್ಲಿ ನೆಲೆಸಿದೆ. ಹಾಗಾಗಿ ಕನ್ನಡಿಗರು ಸಹಿಷ್ಣುತೆಗೆ ಆದರ್ಶವಾದವರು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯ ಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾರತಿ ಭಾನುವಾರ ಏರ್ಪಡಿಸಿದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಆರ್. ತಿಮ್ಮರಾಯಪ್ಪ ಅವರು ಪುಷ್ಪ ನಮನ ಸಲ್ಲಿಸಿದರು. ಕನ್ನಡ ಭಾರತಿ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಎನ್. ಬಿ .ತಿಪ್ಪೇಸ್ವಾಮಿ ಡಾ.ಎಂ. ರವಿನಾಯ್ಕ, ಡಾ. ದೇವಿದಾಸ್, ಡಾ. ಸಂತೋಷ್ ಕುಮಾರ್ ಹಾಗೂ ಅಧ್ಯಾಪಕೇತರ ನೌಕರರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಿದ್ದರು.
