ಬಳ್ಳಾರಿ: ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಗೌಸಿಯಾ ಎಜ್ಯುಕೇಶನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ಕನ್ನಡ ಭಾಷೆಯನ್ನು ಪ್ರೀತಿಸುವುದು ಮಾತ್ರವಲ್ಲ, ಅದನ್ನು ನಮ್ಮ ಹೃದಯದಲ್ಲಿ ಗೌರವದಿಂದ ಇರಿಸಿಕೊಂಡು ದೈನಂದಿನ ಜೀವನದಲ್ಲಿ ಬಳಸಬೇಕು. ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿತು ಮಾತನಾಡುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶ್ವ ರಾಮು ಅವರು ಮಾತನಾಡಿ, ಕನ್ನಡ ನಾಡಿನ ಇತಿಹಾಸ, ನಾಡು-ನುಡಿ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ಭಾಷೆಯ ಶ್ರೀಮಂತಿಕೆಯ ಕುರಿತು ವಿವರಿಸಿದರು. ಕನ್ನಡ ಭಾಷೆ ನಮ್ಮ ಅಸ್ಮಿತೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಅದರ ಉಳಿವು ಮತ್ತು ಬೆಳವಣಿಗೆಯಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಾತೃಭಾಷೆಯಲ್ಲದ ಉಪನ್ಯಾಸಕರಿಗೆ ಕನ್ನಡ ಮಾತನಾಡಲು ವಿಶೇಷ ಪ್ರೇರಣೆ ನೀಡಲಾಯಿತು. ಅದರಂತೆ ಎಲ್ಲರೂ ಕನ್ನಡದಲ್ಲಿ ಮಾತನಾಡಿ, ಪರಸ್ಪರ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಶಿಕ್ಷಣಾರ್ಥಿಗಳಾದ ಶಿವಕುಮಾರ ಮತ್ತು ವೀರೇಶ ಅವರು ಕನ್ನಡ ಭಾಷೆಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಆಲ್ಮಸ್ ತಬಸ್ಸುಮ್, ಆಡಳಿತಾಧಿಕಾರಿಗಳಾದ ಶ್ರೀಮತಿ ಹಫೀಜಾ ಬೇಗಂ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗಣಕಯಂತ್ರ ವಿಭಾಗದ ತಾಂತ್ರಿಕ ಸಹಾಯಕರಾದ ಸೈಯದ್ ಅಲಿ ಅವರು ಕನ್ನಡದ ಸುಮಧುರ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ಸೋಮಶೇಖರ್ ಸ್ವಾಗತಿಸಿದರು. ರವಿ ನಿರೂಪಿಸಿದರು. ಶಾರದ ವಂದಿಸಿದರು.
